ಸೈನಿಕರ ಸೇವಾ ವೇತನದ ವಿರುದ್ಧ ಸರಕಾರದ ಸರ್ಜಿಕಲ್ ಸ್ಟ್ರೈಕ್!
ಈ ದೇಶದ ಸೇನೆಯನ್ನು ತನ್ನ ರಾಜಕೀಯಕ್ಕಾಗಿ ಬಳಸಿಕೊಂಡ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಶ್ಮೀರದ ಗಡಿಯಲ್ಲಿ ಸೈನಿಕರ ಸಾವನ್ನು ಮುಂದಿಟ್ಟು ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಯಾಚಿಸಿದರು. ‘ನಮ್ಮ ಸೈನಿಕರ ಮೂರು ತಲೆಗೆ ಅವರ ನೂರು ತಲೆ’ ಎಂದು ಹೇಳಿ ಅಧಿಕಾರ ಹಿಡಿದ ನರೇಂದ್ರ ಮೋದಿಯವರು, ಕದ್ದು ಮುಚ್ಚಿ ಪಾಕಿಸ್ತಾನಕ್ಕೆ ಹೋಗಿ, ನವಾಝ್ ಶರೀಫ್ ಅವರ ಜೊತೆ ಬಿರಿಯಾನಿ ಉಂಡು ಬಂದರು. ಉಗ್ರರ ದಾಳಿ ಪದೇ ಪದೇ ನಡೆದು ಸರಕಾರಕ್ಕೆ ಮುಖಭಂಗವಾದಾಗ, ಸೈನಿಕರು ನಡೆಸಿದ್ದಾರೆನ್ನಲಾದ ಸರ್ಜಿಕಲ್ ಸ್ಟ್ರೈಕ್‌ನ ಲಾಭವನ್ನು ತನ್ನದಾಗಿಸಲು ಯತ್ನಿಸಿದರು. ಈ ದಾಳಿಯ ಮೂಲಕ ಉಗ್ರರ ನೆಲೆಗಳನ್ನು ನಮ್ಮ ಸೇನೆ ನಾಶ ಪಡಿಸಿದೆ ಎಂದು ಮೋದಿ ಹೇಳುತ್ತಾರಾದರೂ, ಆ ದಾಳಿಯ ಬಳಿಕವೂ ಉಗ್ರರು ಕಾಶ್ಮೀರದಲ್ಲಿ ತಮ್ಮ ಆಕ್ರಮಣಗಳನ್ನು ಮುಂದುವರಿಸುತ್ತಲೇ ಇದ್ದಾರೆ. ಇಷ್ಟಕ್ಕೂ ಈ ಸರ್ಜಿಕಲ್ ಸ್ಟ್ರೈಕ್ ಎಲ್ಲ ಕಾಲದಲ್ಲೂ ನಡೆಯುತ್ತಾ ಬಂದಿರುವ ಮಾಮೂಲಿ ಕಾರ್ಯಾಚರಣೆ. ಇದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೂ ನಡೆದಿತ್ತು. ಯಾವ ಪ್ರಧಾನಿಯೂ ಇದನ್ನು ರಾಜಕೀಯವಾಗಿ ಬಳಸಿಕೊಂಡಿರಲಿಲ್ಲ. ಶ್ರೀಮತಿ ಇಂದಿರಾಗಾಂಧಿಯ ಕಾಲದಲ್ಲಿ, ಭಾರತದ ಸೇನೆ ಪಾಕಿಸ್ತಾನ ಮತ್ತು ಬಾಂಗ್ಲಾವನ್ನು ಬೇರ್ಪಡಿಸಿತು. ಬಾಂಗ್ಲಾ ದೇಶಕ್ಕೆ ಸ್ವಾತಂತ್ರವನ್ನು ಕೊಟ್ಟಿತು. ಆದರೆ ಎಂದಿಗೂ ಅದನ್ನು ಚುನಾವಣೆಯ ಪ್ರಚಾರಕ್ಕೆ ಕಾಂಗ್ರೆಸ್ ಬಳಸಿರಲಿಲ್ಲ.
ಆದರೆ ಕೇಂದ್ರ ಸರಕಾರ ‘ಸರ್ಜಿಕಲ್ ಸ್ಟ್ರೈಕ್ ಡೇ’ಯನ್ನು ವಾರ್ಷಿಕ ದಿನಾಚರಣೆಯಾಗಿ ಆಚರಿಸಲು ಸುತ್ತೋಲೆ ಹೊರಡಿಸಿತು. ಬೆಟ್ಟ, ಗುಡ್ಡ, ಕಾಡು, ಮಂಜುಗಳ ನಡುವೆ ಹೋರಾಡುತ್ತಾ ದೇಶ ಕಾಯುವ ಸೈನಿಕರ ಸೇವೆಯನ್ನು ‘ಬಿಜೆಪಿ’ಯ ಹಿತಾಸಕ್ತಿಗಾಗಿ ಬಳಸುವ ಮೂಲಕ ಅತ್ಯಂತ ಅಸಹ್ಯ ರಾಜಕಾರಣಕ್ಕೆ ನಾಂದಿ ಹಾಡಿದರು. ಸೇನೆ, ದೇಶ ಎಂದು ಹೇಳುತ್ತಲೇ ಇನ್ನೊಂದೆಡೆ ರಫೇಲ್ ಡೀಲ್ ಮೂಲಕ ರಿಲಯನ್ಸ್ ಕಂಪೆನಿಗೆ ಕೋಟ್ಯಂತರ ರೂ. ಹಣ ಲಾಭ ಮಾಡಿಕೊಟ್ಟರು. ದುರಂತವೆಂದರೆ, ಮಾತು ಮಾತಿಗೆ ಸೇನೆಯ ಬಗ್ಗೆ ಮಾತನಾಡುವ ಮೋದಿ ರಫೇಲ್ ಹಗರಣದಲ್ಲಿ ಸೇನೆಗಾದ ನಷ್ಟದ ಕುರಿತು ವೌನ ತಳೆದಿದ್ದಾರೆ. ‘ಬೊಫೋರ್ಸ್ ಹಗರಣ’ದ ಮುಂದೆ ಈ ‘ರಫೇಲ್ ಹಗರಣ’ ಏನೇನೂ ಅಲ್ಲ ಎನ್ನುವುದನ್ನು ಈಗಾಗಲೇ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಯಾವುದೇ ತನಿಖೆ ನಡೆಯದಂತೆ ನೋಡಿಕೊಳ್ಳುವ ಮೂಲಕ, ಹಗರಣದಲ್ಲಿ ತನ್ನ ಪಾತ್ರವೂ ಇದೆ ಎನ್ನುವುದನ್ನು ಸರಕಾರ ಸಾಬೀತು ಮಾಡಿದೆ.
ಸೇನೆಯ ಮೇಲೆ ಅಪಾರ ಕಾಳಜಿಯಿದೆಯೆಂದು ನಟಿಸುವ ನರೇಂದ್ರ ಮೋದಿ, ದೀಪಾವಳಿ ಸೇರಿದಂತೆ ಹಬ್ಬಗಳ ದಿನ ಅವರೊಂದಿಗೆ ಫೋಟೊ ಹೊಡೆಸಿ ಮಾಧ್ಯಮಗಳಲ್ಲಿ ಪ್ರಚಾರವನ್ನು ಪಡೆಯುತ್ತಾರೆ. ಆದರೆ ಸೇನೆಯ ಕುರಿತಂತೆ ಕೇಂದ್ರ ಸರಕಾರದ ನಿಜವಾದ ನಿಲುವು ಏನು ಎನ್ನುವುದು ಎರಡು ದಿನಗಳ ಹಿಂದೆ ಬಯಲಾಗಿದೆ. ಮಿಲಿಟರಿ ಸೇವಾ ವೇತನವನ್ನು 5,500ದಿಂದ 10,000 ರೂಪಾಯಿಗೆ ಏರಿಕೆೆ ಮಾಡಬೇಕು ಎನ್ನುವ ಸಶಸ್ತ್ರ ಪಡೆಗಳ ಬೇಡಿಕೆಯನ್ನು ಸಾರಾಸಗಟಾಗಿ ಕೇಂದ್ರ ಸರಕಾರ ತಿರಸ್ಕರಿಸಿದೆ. ಸರಕಾರದ ಈ ನಿರ್ಧಾರಕ್ಕೆ ಸೇನಾ ಮುಖ್ಯ ಕಾರ್ಯಾಲಯ ತೀವ್ರ ಬೇಸರವನ್ನು ವ್ಯಕ್ತಪಡಿಸಿದೆ. ಸರಕಾರದ ಕಠಿಣ ನಿರ್ಧಾರದಿಂದ 1.12 ಲಕ್ಷ ಸೇನಾ ಸಿಬ್ಬಂದಿ ಸೇವಾವೇತನ ಏರಿಕೆಯಿಂದ ವಂಚಿತರಾಗಿದ್ದಾರೆ. ಇಷ್ಟಕ್ಕೂ ಪ್ರಸ್ತಾವ ತಿರಸ್ಕಾರಕ್ಕೆ ಸರಕಾರ ನೀಡಿರುವ ಕಾರಣವಾದರೂ ಏನು? ಒಂದು ವೇಳೆ ಸೇವಾ ವೇತನ ಹೆಚ್ಚಿಸಿದರೆ ಬೊಕ್ಕಸಕ್ಕೆ 610 ಕೋಟಿ ರೂಪಾಯಿ ವಿತ್ತೀಯ ಹೊರೆ ಬೀಳುತ್ತದೆ ಎನ್ನುವುದು ಸರಕಾರದ ಆತಂಕ. ಎಸಿ ಕಾರು, ಎಸಿ ಬಂಗಲೆಗಳಲ್ಲಿ ಬದುಕುತ್ತಾ, ಐಷಾರಾಮಿ ಜೀವನ ನಡೆಸುವ ರಾಜಕಾರಣಿಗಳೇ ಪ್ರತಿ ವರ್ಷ ತಮ್ಮ ವೇತನ, ಭತ್ತೆ ಹೆಚ್ಚಳಕ್ಕಾಗಿ ಮಾಧ್ಯಮಗಳಲ್ಲಿ ಗೋಳಾಡುತ್ತಾರೆ ಅಥವಾ ಸದ್ದಿಲ್ಲದೆ ವೇತನಗಳನ್ನು ಹೆಚ್ಚಿಸಿಕೊಳ್ಳುತ್ತಾರೆ.
ಇದೇ ಸಂದರ್ಭದಲ್ಲಿ ಅತ್ಯಂತ ಕಠಿಣ ಪ್ರದೇಶಗಳಲ್ಲಿ ಸೇವಾ ಸಲ್ಲಿಸುವ ಸೈನಿಕರಿಗೆ ಸೇವ ವೇತನವನ್ನು ಹೆಚ್ಚಿಸುವ ಸಂದರ್ಭದಲ್ಲಿ ಮಾತ್ರ ಸರಕಾರಕ್ಕೆ ವಿತ್ತೀಯ ಕೊರತೆ ಯಾಕೆ ಕಾಡಿತು? ಸೈನಿಕರು ಹೋರಾಡಬೇಕಾದುದು ಪಾಕಿಸ್ತಾನ, ಚೀನಾದ ಶತ್ರುಗಳ ಜೊತೆಗೆ ಮಾತ್ರವಲ್ಲ. ಮಳೆ, ಚಳಿ, ಹಿಮ, ತಿಗಣೆ, ಸೊಳ್ಳೆ, ಬಿಸಿಲು, ಹಸಿವು, ನೋವು, ರೋಗರುಜಿನ ಇವೆಲ್ಲದರ ಜೊತೆಗೂ ಹಗಲು ರಾತ್ರಿ ಹೋರಾಡುತ್ತಾ ಗಡಿ ಕಾಯಬೇಕಾಗುತ್ತದೆ. ಶತ್ರುಗಳ ದಾಳಿಗಳಿಗಿಂತ ಹಿಮಪಾತ, ಅತಿಯಾದ ಚಳಿಗೆ ಮೃತಪಟ್ಟ ಸೈನಿಕರ ಸಂಖ್ಯೆಯೇ ದೊಡ್ಡದಿದೆ. ಹೀಗೆ ಕಠಿಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ನೀಡುವ ಆಹಾರದ ಗುಣಮಟ್ಟವನ್ನು ಬಹಿರಂಗಪಡಿಸಿದ ಸೈನಿಕನ ಗತಿ ಏನಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಇವರ ವೇತನಗಳಲ್ಲಿ ಒಂದಿಷ್ಟು ಹೆಚ್ಚಳವಾದರೂ, ಅವರ ತ್ಯಾಗಕ್ಕೆ ನಾವು ನೀಡುವ ಮನ್ನಣೆಯಾಗುತ್ತಿತ್ತು.
ಒಂದನ್ನು ನೆನಪಿಟ್ಟುಕೊಳ್ಳಬೇಕು. ಕಾಶ್ಮೀರದ ಕಣಿವೆಯಲ್ಲಿ ಸೇವೆ ಮಾಡುವ ಸೈನಿಕರಲ್ಲಿ ಹಲವರು ರೋಗಗ್ರಸ್ತರಾಗಿ ಮನೆ ಸೇರುತ್ತಾರೆ. ಇವರ ಕುರಿತಂತೆ ಯಾವ ಮಾಧ್ಯಮಗಳೂ ಬರೆಯುವುದಿಲ್ಲ. ಹಿಮದ ಮಧ್ಯೆ ಕೈ ಕಾಲು ಕೊಳೆತಿರುವುದೇ ಗೊತ್ತಿಲ್ಲದೆ ಅಂಗಾಂಗಗಳನ್ನು ಕಳೆದುಕೊಂಡು ಅಂಗವಿಕಲರಾದವರಿದ್ದಾರೆ. ಇವರ ತ್ಯಾಗ ಬಲಿದಾನ ಯಾರಿಗೂ ಬೇಕಾಗಿಲ್ಲ. ಗಡಿ ಪ್ರದೇಶಗಳಲ್ಲಿ ಒಂಟಿಯಾಗಿ ಕಾರ್ಯನಿರ್ವಹಿಸುತ್ತಾ ಖಿನ್ನತೆಗೊಳಗಾಗುವ ಸೈನಿಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಸೈನಿಕರಲ್ಲಿ ಆತ್ಯಹತ್ಯೆ ಮಾಡುತ್ತಿರುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಖಿನ್ನತೆಗೊಳಗಾಗಿ ತನ್ನ ಸಹೋದ್ಯೋಗಿಗಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಳ್ಳುವ ವರದಿಗಳು ಪದೇ ಪದೇ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇಷ್ಟೆಲ್ಲ ಒತ್ತಡಗಳಲ್ಲಿ ಕಾರ್ಯನಿರ್ವಹಿಸುವ ಸೈನಿಕರ ಸೇವಾ ವೇತನ ಹೆಚ್ಚಿಸುವಾಗ ಸರಕಾರಕ್ಕೆ ವಿತ್ತೀಯ ಕೊರತೆ ಎದುರಾಗುತ್ತದೆ. ಇದೇ ಸಂದರ್ಭದಲ್ಲಿ, ಈ ದೇಶಕ್ಕೆ ಯಾವ ರೀತಿಯಲ್ಲೂ ಪ್ರಯೋಜನವಿಲ್ಲದ ಪಟೇಲರ ಬೃಹತ್ ಪ್ರತಿಮೆಯನ್ನು 3000 ಕೋಟಿ ರೂಪಾಯಿ ವೆಚ್ಚದಲ್ಲಿ ಸರಕಾರ ನಿರ್ಮಾಣ ಮಾಡಿದಾಗ ವಿತ್ತೀಯ ಕೊರತೆಯ ಸಮಸ್ಯೆ ಎದುರಾಗಲಿಲ್ಲ.
ಇದೀಗ ಶಿವಾಜಿ ಪಾರ್ಕ್, ರಾಮನ ಪ್ರತಿಮೆ, ಬುದ್ಧನ ಪ್ರತಿಮೆ ಎಂದು ಮಾತು ಬಾರದ ಕಬ್ಬಿಣದ ಗೊಂಬೆಗಳನ್ನು ನಿಲ್ಲಿಸಲು ಸರಕಾರ ಸಾವಿರಾರು ಕೋಟಿ ರೂಪಾಯಿಯನ್ನು ವೆಚ್ಚ ಮಾಡಲು ಹೊರಟಿದೆ. ಆ ಹಣವನ್ನು ಸೈನಿಕರ ಏಳಿಗೆಗೆ, ವೇತನಕ್ಕೆ ಬಳಸಿದ್ದರೆ ಆಗಿ ಹೋದ ನಾಯಕರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಿದಂತಾಗುತ್ತಿತ್ತು. ಪಟೇಲರು ಗೋವಾ ಸೇರಿದಂತೆ ವಿವಿಧ ರಾಜ್ಯಗಳನ್ನು ಭಾರತದ ತೆಕ್ಕೆಗೆ ಸೇರಿಸಿದ್ದು ಸೈನಿಕರ ಬಲದಿಂದ. ಸೈನಿಕರ ಬದುಕನ್ನು ಉತ್ತಮಗೊಳಿಸಿದರೆ ಅದುವೇ ಪಟೇಲರಿಗೆ ಸಲ್ಲಿಸುವ ಅತ್ಯುತ್ತಮ ಗೌರವವಾಗುತ್ತಿತ್ತು. ಸೇನೆಯ ಬೇಡಿಕೆಯನ್ನು ತಿರಸ್ಕರಿಸಿ ಪಟೇಲರ 3000 ಕೋಟಿ ರೂ. ವೆಚ್ಚದ ಪ್ರತಿಮೆ ನಿರ್ಮಾಣ ಮಾಡಿರುವುದು ಪಟೇಲರಿಗೆ ಮಾಡಿದ ಅಗೌರವವೇ ಸರಿ. ಸೈನಿಕರು ಪ್ರಾಣ ಒತ್ತೆಯಿಟ್ಟು ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ಹೆಸರು ಬಳಸಿ ಲಾಭ ಮಾಡಲು ಯೋಚಿಸುವ ಕೇಂದ್ರ ಸರಕಾರ ಇದೀಗ ಅವರ ಸೇವಾ ವೇತನ ಬೇಡಿಕೆಯನ್ನು ತಿರಸ್ಕರಿಸುವ ಮೂಲಕ, ಸೈನಿಕರ ವಿರುದ್ಧವೇ ಸರ್ಜಿಕಲ್ ಸ್ಟ್ರೈಕ್ ನಡೆಸಿದೆೆ. ನಮ್ಮನ್ನಾಳುವವರ ಲಜ್ಜೆಗೇಡಿತನದ ಪರಮಾವಧಿ ಇದು.