ಆಡಿನ ಹಸಿವೆಯಿಂದ 16 ಲಕ್ಷ ರೂ. ಕಳೆದುಕೊಂಡ ಕುಟುಂಬ!
ಬೆಲ್ಗ್ರೇಡ್, ಡಿ.7: ಸರ್ಬಿಯಾದ ಅರಂಡಜೆಲೊವ್ಯಾಕ್ ಪ್ರಾಂತ್ಯದ ಸಮೀಪವಿರುವ ರನಿಲೊವಿಕ್ ಎಂಬ ಗ್ರಾಮದ ಸಿಮಿಕ್ ಕುಟುಂಬದ ಕಥೆಯಿದು. ಕುಟುಂಬವೊಂದು ತನ್ನ ಗದ್ದೆಯನ್ನು ವಿಸ್ತರಿಸಲೆಂದು ಕಷ್ಟದಿಂದ ಉಳಿತಾಯ ಮಾಡಿದ ಹಣವನ್ನು ಹಸಿದ ಆಡೊಂದು ತಿಂದ ಘಟನೆ ನಡೆದಿದ್ದು, ಆಕ್ರೋಶಗೊಂಡ ಕುಟುಂಬ ಆ ಆಡನ್ನು ಕಡಿದು ಅದರ ಮಾಂಸವನ್ನು ಪತ್ರಕರ್ತರಿಗೆ ಉಣ ಬಡಿಸಿದೆ.
ಕುಟುಂಬವು 10 ಹೆಕ್ಟೇರ್ ಜಮೀನು ಖರೀದಿಸಲು ಯೋಚಿಸಿತ್ತೆನ್ನಲಾಗಿದೆ. ಅದಕ್ಕಾಗಿ ಜಮೀನು ಮಾರಾಟಗಾರನನ್ನು ಭೇಟಿಯಾಗುವ ಮೊದಲು 20,000 ಯುರೋ (16 ಲಕ್ಷ ರೂ.) ಹಣವನ್ನು ಲೆಕ್ಕ ಮಾಡಿ ಮೇಜಿನ ಮೇಲಿರಿಸಿದ ಕುಟುಂಬ ಸದಸ್ಯರು ಡೈನಿಂಗ್ ಹಾಲ್ ಗೆ ಹೋಗಿ ಉಪಾಹಾರ ಸ್ವೀಕರಿಸಲು ಕುಳಿತಿದ್ದರು. ಆಗ ಕುಟುಂಬದ ಹಿರಿಯ ಸದಸ್ಯರೊಬ್ಬರು ದನಗಳಿಗೆ ಆಹಾರ ನೀಡಲೆಂದು ಹೊರ ಹೋಗುವಾಗ ಎದುರಿನ ಬಾಗಿಲ ಚಿಲಕ ಹಾಕಲು ಮರೆತಿದ್ದರು. ಕುಟುಂಬ ಕಳೆದೆರಡು ವರ್ಷಗಳಿಂದ ಸಾಕುತ್ತಿದ್ದ ಆಡು ಬೆಲ್ಕಾ ಆಗ ಮನೆಯೊಳಗೆ ಪ್ರವೇಶಿಸಿ ಮೇಜಿನ ಮೇಲಿದ್ದ ಹಣವನ್ನು ತಿನ್ನಲು ಆರಂಭಿಸಿತ್ತು.
“ಸದ್ದು ಕೇಳಿ ನನ್ನ ಪತಿ ಹೊರಗೆ ಬಂದು ನೋಡಿದಾಗ ಹೃದಯಾಘಾತವಾಗುವುದು ಬಾಕಿಯಿತ್ತು. ಎಲ್ಲಾ ಹಣ ತಿಂದು ಕೇವಲ 300 ಯುರೋ ಮಾತ್ರ ಉಳಿದಿತ್ತು, ಉಳಿದಿದ್ದು ಒಂದೋ ಆಡಿನ ಹೊಟ್ಟೆಗೆ ಹೋಗಿತ್ತು ಇಲ್ಲವೇ ಚಿಂದಿ ಚೂರಾಗಿತ್ತು,'' ಎಂದು ಮಿಲೆನಾ ಕಣ್ಣೀರು ಹಾಕುತ್ತಾ ಹೇಳುತ್ತಾರೆ.
ನಂತರ ಸಿಟ್ಟಿನಿಂದ ಕುಟುಂಬವು ಆಡನ್ನು ಕಡಿದು ಅದರ ಮಾಂಸದಿಂದ ತಯಾರಿಸಿದ ಪದಾರ್ಥದ ಔತಣಕೂಟವನ್ನು ಪತ್ರಕರ್ತರಿಗಾಗಿ ಏರ್ಪಡಿಸಿತ್ತು.