‘ದಲಿತ’ ಹನುಮಂತನ ‘ಜಾತಿ ಪ್ರಮಾಣಪತ್ರ’ ನೀಡದಿದ್ದರೆ ಹೋರಾಟದ ಎಚ್ಚರಿಕೆ !
ವಾರಣಾಸಿ(ಉ.ಪ್ರ),ಡಿ.7: ಹಿಂದುಗಳು ಆರಾಧಿಸುವ ಹನುಮಂತ ದಲಿತನಾಗಿದ್ದನೇ ಎಂಬ ಕುರಿತು ನಡೆಯುತ್ತಿರುವ ಚರ್ಚೆ ಶುಕ್ರವಾರ ಆಸಕ್ತಿಕರ ತಿರುವನ್ನು ಪಡೆದುಕೊಂಡಿದೆ. ಜಿಲ್ಲಾಡಳಿತವು ಹನುಮಂತನ ಜಾತಿ ಪ್ರಮಾಣಪತ್ರವನ್ನು ನೀಡಬೇಕು ಎಂದು ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಾರ್ಟಿ(ಲೋಹಿಯಾ)ವು ಆಗ್ರಹಿಸಿದೆ. ಒಂದು ವಾರದೊಳಗೆ ಜಿಲ್ಲಾಡಳಿತವು ಜಾತಿ ಪ್ರಮಾಣಪತ್ರವನ್ನು ನೀಡದಿದ್ದರೆ ಧರಣಿ ಸತ್ಯಾಗ್ರಹವನ್ನು ನಡೆಸುವುದಾಗಿ ಅದು ಬೆದರಿಕೆಯೊಡ್ಡಿದೆ.
ಹನುಮಂತ ದಲಿತನಾಗಿದ್ದ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚಿಗೆ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಬಣ್ಣಿಸಿದ್ದರು. ಹನುಮಂತನ ಜಾತಿ ಪ್ರಮಾಣಪತ್ರಕ್ಕಾಗಿ ವಾರಣಾಸಿ ಜಿಲ್ಲಾಧಿಕಾರಿಗಳ ಕಚೇರಿಗೆ ನಾವು ಅರ್ಜಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ಹನುಮಂತನನ್ನು ದಲಿತ ಎಂದು ಬಣ್ಣಿಸಿ ಚಿಲ್ಲರೆ ಜಾತಿ ರಾಜಕೀಯಕ್ಕೆ ದೇವರನ್ನು ಎಳೆದು ತಂದಿರುವುದರಿಂದ ನಮಗೆ ಈ ಜಾತಿ ಪ್ರಮಾಣಪತ್ರ ಬೇಕು ಎಂದು ಪಿಎಸ್ಪಿಎಲ್ ಜಿಲ್ಲಾ ಯುವಘಟಕದ ಅಧ್ಯಕ್ಷ ಹರೀಶ್ ಮಿಶ್ರಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪಿಎಸ್ಪಿಎಲ್ ಸಲ್ಲಿಸಿರುವ ಅರ್ಜಿಯಲ್ಲಿ ಹನುಮಂತನ ಚಿತ್ರವನ್ನು ಅಂಟಿಸಲಾಗಿದ್ದು,ತಂದೆಯ ಹೆಸರನ್ನು ಮಹಾರಾಜ ಕೇಸರಿ ಮತ್ತು ತಾಯಿಯ ಹೆಸರನ್ನು ಅಂಜನಾ ದೇವಿ ಎಂದು ಉಲ್ಲೇಖಿಸಲಾಗಿದೆ. ಪ್ರಸಿದ್ಧ ಸಂಕಟಮೋಚನ ದೇವಸ್ಥಾನವನ್ನು ಹನುಮಂತನ ನಿವಾಸ ಸ್ಥಳವೆಂದು ಘೋಷಿಸಲಾಗಿದ್ದು,ಜಾತಿ ಕಾಲಮ್ನಲ್ಲಿ ದಲಿತ ಎಂದು ನಮೂದಿಸಲಾಗಿದೆ. ವಯಸ್ಸನ್ನು ‘ಅಮರ’ಎಂದು ಮತ್ತು ಹುಟ್ಟಿದ ವರ್ಷವನ್ನು ‘ಅನಂತ’ಎಂದು ನಮೂದಿಸಲಾಗಿದೆ.