ಪ್ರಕೃತಿಯೊಂದಿಗೆ ಮಕ್ಕಳನ್ನು ಬೆಳೆಸಿ: ಕೃಪಾ ಆಳ್ವ
ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್‌ಗೆ ಅಲೆವೂರು ಗ್ರೂಪ್ ಪ್ರಶಸ್ತಿ

ಅಲೆವೂರು, ಡಿ.7: ದೇಶದ ಆಸ್ತಿಯಾಗಿರುವ ಮಕ್ಕಳ ಭವಿಷ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕಾಗಿದೆ. ಅದಕ್ಕಾಗಿ ಅವರನ್ನು ಪ್ರೀತಿಯಿಂದ ಬೆಳೆಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಆಧ್ಯಕ್ಷೆ ಕೃಪಾ ಆಳ್ವ ಹೇಳಿದ್ದಾರೆ.
ಅಲೆವೂರು ಗ್ರೂಪ್ ಫಾರ್ ಎಜ್ಯುಕೇಷನ್ ವತಿಯಿಂದ ಭೌತಶಾಸ್ತ್ರ ಉಪ ನ್ಯಾಸಕ ಹಾಗೂ ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಅವರಿಗೆ 2018ನೇ ಸಾಲಿನ ಅಲೆವೂರು ಗ್ರೂಪ್ ಪ್ರಶಸ್ತಿಯನ್ನು ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಕ್ರವಾರ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.
ಮಕ್ಕಳನ್ನು ಪ್ರಕೃತಿಯೊಂದಿಗೆ ಬೆಳೆಸಬೇಕು. ಮಕ್ಕಳನ್ನು ವಸ್ತುಗಳಾಗಿ ನೋಡದೆ, ಇನ್ನೊಬ್ಬರಿಗೆ ಹೋಲಿಸದೆ ಸ್ನೇಹಮಯವಾಗಿ ಬೆಳೆಸಬೇಕು. ಮಗುವಿನ ವ್ಯಕ್ತಿತ್ವಕ್ಕೆ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಅದರೊಂದಿಗೆ ಪೋಷಕರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಮಕ್ಕಳನ್ನು ಅವರ ಆಸಕ್ತಿಗೆ ಅನು ಗುಣವಾಗಿ ಬೆಳಸಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ.ಎ.ಪಿ.ಭಟ್ ಮಾತನಾಡಿ, ಮಕ್ಕಳನ್ನು ಪ್ರಕೃತಿ ಯೊಂದಿಗೆ ಬೆರೆತು ಸಂಭ್ರಮಿಸಲು ಅವಕಾಶ ಮಾಡಿಕೊಡಬೇಕು. ಅವರಿಗೆ ಪ್ರಕೃತಿ ಯೊಂದಿಗಿನ ಒಡನಾಟ ತಿಳಿಹೇಳಬೇಕು. ಪ್ರಕೃತಿಯಲ್ಲಿ ವಿಜ್ಞಾನ ಹಾಗೂ ಜೀವರಾಶಿಗಳ ಭವ್ಯತೆ ಇದೆ. ಶಿಕ್ಷಣ ನೀಡಬೇಕಾದ ವಿದ್ಯಾ ಸಂಸ್ಥೆಗಳೇ ಇಂದು ಸೂರ್ಯಗ್ರಹಣದಂತಹ ಸಂದರ್ಭದಲ್ಲಿ ಮಕ್ಕಳಿಗೆ ಪ್ರಕೃತಿಯಲ್ಲಿನ ವಿಸ್ಮಯ ತಿಳಿ ಸುವ ಬದಲು ರಜೆ ನೀಡಿ ಮನೆಯಲಿ್ಲ ಇರುವಂತೆ ಮಾಡುತ್ತಿದೆ ಎಂದರು.
ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶೇಷ ಶಯನ ಕಾರಿಂಜ ಮುಖ್ಯ ಅತಿಥಿಯಾಗಿದ್ದರು. ಅಲೆವೂರು ಗ್ರೂಪ್ ಅಧ್ಯಕ್ಷ ಎ.ಗಣಪತಿ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಗ್ರೂಪ್‌ನ ಕೋಶಾಧಿಕಾರಿ ಹರೀಶ್ ಕಿಣಿ ಉಪಸ್ಥಿತರಿದ್ದರು. ಪ್ರಾಂಶುಪಾಲ ರೂಪಾ ಡಿ.ಕಿಣಿ ವರದಿ ವಾಚಿಸಿದರು. ಗ್ರೂಪ್‌ನ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ ಸ್ವಾಗತಿಸಿದರು. ಶಿಕ್ಷಕಿ ಚಿತ್ರಾ ಶ್ರೀನಾಥ್ ವಂದಿಸಿದರು. ಶ್ರೀನಿವಾಸ ಉಪಾಧ್ಯ ಹಾಗೂ ಗಾಯತ್ರಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.