ಬ್ರೇಕ್ಸಿಟ್‌ನಿಂದ ಭಾರತ-ಇ.ಯು. ಸಂಬಂಧದ ಮೇಲೆ ಪರಿಣಾಮವಿಲ್ಲ
ಯುರೋಪಿಯನ್ ಒಕ್ಕೂಟದ ರಾಯಭಾರಿ ಸ್ಪಷ್ಟೋಕ್ತಿ

ಮಣಿಪಾಲ, ಡಿ.7: ಯುರೋಪಿಯನ್ ಒಕ್ಕೂಟ(ಇಯು)ದಿಂದ ಬ್ರಿಟನ್ ಹೊರಹೋಗುವ ಬ್ರೇಕ್ಸಿಟ್ ಮುಂದಿನ ವರ್ಷದ ಮಾ.29ರಿಂದ ಜಾರಿಗೊಳ್ಳಲಿದ್ದು, ಇದರಿಂದ ಭಾರತವೂ ಸೇರಿದಂತೆ ಉಳಿದೆಲ್ಲಾ ದೇಶಗಳೊಂದಿಗೆ ಯುರೋಪಿಯನ್ ಒಕ್ಕೂಟದ ಸಂಬಂಧದ ಮೇಲೆ ಯಾವುದೇ ನೇರ ಪರಿಣಾಮ ಉಂಟಾಗುವುದಿಲ್ಲ ಎಂದು ಭಾರತದಲ್ಲಿ ಇಯುನ ರಾಯಭಾರಿಯಾಗಿರುವ ಥಾಮಸ್ ಕೊಝಿವಸ್ಕಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಮಣಿಪಾಲಕ್ಕೆ ಭೇಟಿ ನೀಡಿದ ಥಾಮಸ್ ಕೊಝಿವಸ್ಕಿ, ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಯುರೋಪಿಯನ್ ಒಕ್ಕೂಟ, ಈಗ ಭಾರತದೊಂದಿಗೆ ಹೊಂದಿರುವ ಎಲ್ಲಾ ಬದ್ಧತೆ, ಒಪ್ಪಂದಗಳಿಗೆ ಮುಂದೆಯೂ ಸಂಪೂರ್ಣವಾಗಿ ಬದ್ಧವಾಗಿರುತ್ತದೆ. ಭಾರತದೊಂದಿಗಿನ ಸಂಬಂಧವೂ ಬ್ರೇಕ್ಸಿಟ್ ಬಳಿಕವೂ ಇದೇ ರೀತಿ ಮುಂದು ವರಿಯುತ್ತದೆ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಯುರೋಪಿಯನ್ ಒಕ್ಕೂಟ ಈಗ ಭಾರತದ ಅತೀ ದೊಡ್ಡ ವ್ಯವಹಾರ ಜೊತೆಗಾರನಾಗಿದ್ದು, ಬ್ರೇಕ್ಸಿಟ್ ನಂತರವೂ ಭಾರತದ ಅತೀ ದೊಡ್ಡ ವ್ಯವಹಾರ ಜೊತೆಗಾರನಾಗಿಯೇ ಮುಂದುವರಿಯುತ್ತದೆ ಎಂದವರು ನುಡಿದರು.
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಸಾಂಪ್ರದಾಯಿಕ ಸ್ನೇಹತ್ವವಿದೆ. ಮೂರು ವರ್ಷಗಳ ಹಿಂದೆ 2016ರಲ್ಲಿ ಎರಡೂ ದೇಶಗಳ ನಡುವೆ ಹೊಸ ಒಪ್ಪಂದವಾದ ಬಳಿಕ ಈ ಸಂಬಂಧ ಇನ್ನೊಂದು ಮಜಲನ್ನು ಮುಟ್ಟಿದೆ ಎಂದರು.
ಕಳೆದ 30 ವರ್ಷಗಳಿಂದ ತೃತೀಯ ದೇಶಗಳಿಗೆ ಸಹಾಯ ನೀಡುವ ಎರಾಸ್‌ಮಸ್ ಕಾರ್ಯಕ್ರಮದಡಿ ಭಾರತ ಭಾರೀ ನೆರವನ್ನು ಪಡೆದಿದೆ. ಭಾರತದ 6000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡಲಾಗಿದೆ. ಇವುಗಳಲ್ಲಿ 250ಕ್ಕೂ ಅಧಿಕ ಮಂದಿ ಕರ್ನಾಟಕದವರಿದ್ದರೆ, 25 ಮಂದಿ ಮಣಿಪಾಲದ ವಿದ್ಯಾರ್ಥಿಗಳು ಈ ನೆರವನ್ನು ಪಡೆದಿದ್ದಾರೆ ಎಂದು ಕೊಝಿವಸ್ಕಿ ನುಡಿದರು.
ದೇಶದ ಉನ್ನತ ಶಿಕ್ಷಣದ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮದಡಿ 2018ನೇ ಸಾಲಿನಲ್ಲಿ 55 ಕೋಟಿ ರೂ.ಗಳ ನೆರವನ್ನು ನೀಡಲಾಗಿದೆ. ಎರಡು ಹೊಸ ಯೋಜನೆಗಳಲ್ಲಿ ಇನ್ನೂ 47 ಭಾರತೀಯ ವಿವಿಗಳು ಸೇರ್ಪಡೆ ಗೊಂಡಿವೆ. ಎರಾಸ್‌ಮಸ್ ಕಾರ್ಯಕ್ರಮದಲ್ಲಿ ಮಾಸ್ಟರ್ಸ್‌ಡಿಗ್ರಿಯ 319 ಸ್ಕಾಲರ್‌ಶಿಪ್‌ಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ನೀಡಲಾಗಿದೆ ಎಂದರು.
ದೇಶದಲ್ಲಿ ಇದೇ ಮೊದಲ ಬಾರಿ ಮಣಿಪಾಲದಲ್ಲಿ ನಾಳೆ ಜೀನ್ ಮಾನ್ನೆಟ್ ಸೆಂಟರ್ ಆಫ್ ಎಕ್ಸಲೆನ್ಸ್‌ನ್ನು ಉದ್ಘಾಟಿಸಲಾಗುತ್ತಿದೆ. ಮಾಹೆಯ ಯುರೋಪಿಯನ್ ಸ್ಟಡೀಸ್ ಸೆಂಟರ್‌ನಲ್ಲಿ ಕಾರ್ಯಾಚರಿಸಲಿರುವ ಈ ಕೇಂದ್ರ ದೇಶದಲ್ಲೇ ಮೊದಲನೇಯದಾಗಿದ್ದು, ಎರಡನೇ ಕೇಂದ್ರವನ್ನು ಶೀಘ್ರವೇ ಹೊಸದಿಲ್ಲಿಯ ಜೆಎನ್‌ಯುನಲ್ಲಿ ತೆರೆಯಲಾಗುತ್ತಿದೆ ಎಂದರು.
ಯುರೋಪಿಯನ್ ಒಕ್ಕೂಟ, ಕರ್ನಾಟಕದೊಂದಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿನೊಂದಿಗೆ ಒಳ್ಳೆಯ ಸಂಬಂಧ ಹೊಂದಿದೆ. ಇಲ್ಲಿ 100 ಸ್ಟಾರ್ಟ್‌ಅಪ್‌ಗಳನ್ನು ತೆರೆಯಲಾಗಿದೆ. ಕಳೆದ ಸಪ್ಟೆಂಬರ್‌ನಲ್ಲಿ ಇಯು-ಭಾರತ ಇನ್‌ಕ್ಯೂಬೇಟರ್ ಸೆಂಟರ್‌ನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ. ಅಲ್ಲದೇ ಇಯು ಇನ್ನೊವೇಟಿವ್ ಪ್ಲಾಟ್‌ಫಾರ್ ಕೂಡಾ ಇಲ್ಲಿ ಕಾರ್ಯಾಚರಿಸುತ್ತಿದೆ.
ಯುರೋಪಿಯನ್ ಯೂನಿಯನ್‌ನ ಏರ್‌ಬಸ್‌ನಂಥ ದೊಡ್ಡ ದೊಡ್ಡ ಕಂಪೆನಿಗಳೊಂದಿಗೆ ಮದ್ಯಮ ಹಾಗೂ ಸಣ್ಣ ಉದ್ಯಮಗಳೂ ಇಲ್ಲಿ ಕಾರ್ಯಾಚಿಸುತ್ತಿವೆ ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಅನಿಲ್ ಪಟ್ನಿ, ಫ್ರೆಡ್ರಿಕ್ ಟಿಚಾಂಪ್ ಹಾಗೂ ಯುರ್ರೋಪಿಯನ್ ಸ್ಟಡೀಸ್ ಸೆಂಟರ್‌ನ ಡಾ.ನೀತಾ ಇನಾಂದಾರ್ ಉಪಸ್ಥಿತರಿದ್ದರು.