ಮಂಗಳೂರು: ಶ್ವಾನ ಪ್ರಿಯರಿಗೆ ಮುದ ನೀಡಿದ ಜರ್ಮನ್ ಶೆಪರ್ಡ್, ರಾಟ್ ವೈಲರ್‌ಗಳು

ಮಂಗಳೂರು, ಡಿ.7: ನಗರದ ನೆಹರೂ ಮೈದಾನದಲ್ಲಿ ಇಂದು ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಜರ್ಮನ್ ಶೆಪರ್ಡ್, ರಾಟ್ ವೈಲರ್‌ಗಳು ಶ್ವಾನ ಪ್ರಿಯರಿಗೆ ಮುದ ನೀಡಿದವು.
ಒಂದಕ್ಕಿಂತ ಮತ್ತೊಂದು ವಿಭಿನ್ನ ಎಂಬಂತೆ ಇಂದು ನಡೆದ ಪ್ರದರ್ಶನದಲ್ಲಿ 110 ಶ್ವಾನಗಳು ತಮ್ಮ ತರಬೇತುದಾರರು, ಯಜಮಾನರೊಂದಿಗೆ ಪ್ರತಿಭೆಯನ್ನು ಪ್ರದರ್ಶಿಸಿದವು.
ಕರಾವಳಿ ಕೆನೈನ್ ಕ್ಲಬ್ ವತಿಯಿಂದ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಇದಾಗಿದ್ದು, ಇಂದು ಎರಡು ತಳಿಯ ವಿಶೇಷ ಪ್ರದರ್ಶನವನ್ನು ಆಯೋಜಸಲಾಗಿದ್ದರೆ, ಡಿ.8ರಂದು ಎಲ್ಲಾ ತಳಿಯ ಶ್ವಾನಗಳು ತಮ್ಮ ಚಾಕಚಕ್ಯತೆ, ಸೌಂದರ್ಯ, ಪ್ರತಿಭೆಯನ್ನು ಪ್ರದರ್ಶಿಸಲಿವೆ. ಇಂದಿನ ಪ್ರದರ್ಶನದಲ್ಲಿ ಜರ್ಮನ್ ಶೆಪರ್ಡ್ ತಳಿಯ 80 ಶ್ವಾನಗಳು ಹಾಗೂ ರಾಟ್‌ವೀಲರ್ ತಳಿಯ 30 ಶ್ವಾನಗಳು ಭಾಗವಹಿಸಿದ್ದವು. ವಿಭಿನ್ನ ಹೆಸರು, ಗಾತ್ರ, ಅಂದ-ಚಂದ!
ಇಂದಿನ ವಿಶೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ವಾನಗಳು ವಿಭಿನ್ನ ಹೆಸರು, ವಿಭಿನ್ನ ಗಾತ್ರ ಹಾಗೂ ತಮ್ಮ ಅಂದ- ಚಂದದಿಂದ ಶ್ವಾನ ಪ್ರಿಯರನ್ನು ಆಕರ್ಷಿಸಿದವು.
ಗಾಂಭೀರ್ಯ ನೋಟದ ಗಿಜ್ಮೊ! ಸ್ನೇಹಮಯ ನಡಿಗೆ ಬಿನ್ಸಿನಾ
ಕೇರಳ ಮೂಲದ 2 ವರ್ಷ ಪ್ರಾಯದ ಗಿಜ್ಮೋ ರಾಟ್‌ವೈಲರ್ ಗಂಡು ಶ್ವಾನ, ತನ್ನ ಗಾತ್ರ ಗಾಂಭೀರ್ಯ ನೋಟದಿಂದ ಸೆಳೆದರೆ, ಕ್ಯಾಲಿಕಟ್‌ನ ಬಿನ್ಸಿನಾ ಹೆಣ್ಣು ರಾಟ್‌ವೈಲರ್ ಶ್ವಾನ ತನ್ನ ಯಜಮಾನದ ಜತೆ ಸ್ನೇಹಮಯ ನಡಿಗೆಯ ಮೂಲಕ ಆಕರ್ಷಿಸಿತು.
ಆ್ಯರೋ ಹೆಸರಿನ 9 ತಿಂಗಳ ಗಂಡು ರಾಟ್‌ವೈಲರ್ ಮಾಲಕ ಉಲ್ಲಾಸ್, ‘ವಾರ್ತಾಭಾರತಿ’ಯೊಂದಿಗೆ ಪ್ರತಿಕ್ರಿಯಿಸುತ್ತಾ, ಕಳೆದ 12 ವರ್ಷಗಳಿಂದ ತಾನು ಶ್ವಾನ ಸಾಕಣೆಯ ಹವ್ಯಾಸವನ್ನು ಬೆಳೆಸಿಕೊಂಡಿರುವುದಾಗಿ ಹೇಳಿದರು. ಲ್ಯಾಬ್ರೊಡಾರ್, ಡಾಬರ್‌ಮನ್, ಜರ್ಮನ್ ಶೆಪರ್ಡ್ ಸೇರಿದಂತೆ ವಿವಿಧ ತಳಿಯ ಒಟ್ಟು 17 ಶ್ವಾನಗಳನ್ನು ತಾನು ಹೊಂದಿರುವುದಾಗಿ ತಿಳಿಸಿದ ಉಲ್ಲಾಸ್, ತಿಂಗಳಿಗೆ ಮಾಸಿಕ 45,000 ರೂ.ಗಳನ್ನು ಅವುಗಳ ನಿರ್ವಹಣೆಗಾಗಿ ವೆಚ್ಚ ಮಾಡುತ್ತಿದ್ದೇನೆ. ಬ್ರೀಡಿಂಗ್, ಬಾಡಿಂಗ್ ಜತೆಗೆ ಶ್ವಾನಗಳಿಗೆ ತರಬೇತು ನೀಡುವ ಕೆಲಸವನ್ನು ತಾನು ಮಾಡುತ್ತಿರುವುದಾಗಿ ತಿಳಿಸಿದರು.
ಬೋಳಾರದ ಕಾರ್ತಿಕ್ ಎಂಬವರು ತಮ್ಮ ಎರಡೂವರೆ ವರ್ಷದ ಅಖಿರಾ ಹೆಸರಿನ ಜರ್ಮನ್ ಶೆಪರ್ಡ್ ಶ್ವಾನದೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಶಿವಮೊಗ್ಗ, ಬೆಂಗಳೂರು, ಸೇರಿದಂತೆ ಕೇರಳ ರಾಜ್ಯದಿಂದಲೂ ಶ್ವಾನ ಪ್ರಿಯರು ತಮ್ಮ ಶ್ವಾನಗಳೊಂದಿಗೆ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
9ರಂದು ಸ್ವದೇಶಿ ತಳಿಯ ಶ್ವಾನಗಳೂ ವೀಕ್ಷಕರಿಗೆ ಲಭ್ಯ
ಡಿ.9ರಂದು ನಡೆಯುವ 2ನೇ ದಿನದ ಪ್ರದರ್ಶನದಲ್ಲಿ ಎಲ್ಲಾ ತಳಿಯ, ಜಾತಿಯ ಶ್ವಾನಗಳು ಭಾಗವಹಿಸಲಿದ್ದು, ಮುಧೋಳ ಮತ್ತು ರಾಜ್ಯಪಾಳ್ಯಂ , ಪಾಶ್ಮಿ ಜಾತಿಯ ಸ್ವದೇಶೀ ತಳಿಯ ಶ್ವಾನಗಳನ್ನೂ ಶ್ವಾನಪ್ರಿಯರು ವೀಕ್ಷಿಸಬಹುದಾಗಿದೆ. ಮಾತ್ರವಲ್ಲದೆ ಚಾಂಪಿಯನ್‌ಶಿಪ್ ಪ್ರದರ್ಶನವೂ ನಡೆಯಲಿದ್ದು, ಆಸ್ಟ್ರೇಲಿಯಾದ ಡೊನಾಲ್ಡ್ ಮೊಹೊನಿ, ಟಿ. ಪ್ರೀತಮ್ ಮತ್ತು ಅಂಜೆಲಿ ವೈದ್ ತೀರ್ಪುಗಾರರಾಗಿ ಭಾಗವಹಿಸುವರು.
ಇಂದು ಬೆಳಗ್ಗೆ ಪ್ರದರ್ಶನ ಹಾಗೂ ಸ್ಪರ್ಧೆಗೆ ಮಾಜಿ ಮೇಯರ್ ಅಶ್ರಫ್ ಚಾಲನೆ ನೀಡಿದರು. ಈ ಸಂದರ್ಭ ಕರಾವಳಿ ಕೆನೈನ್ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.