ಮೋದಿಯ ಅಗ್ಗದ ರಾಜಕೀಯ ಬಯಲಿಗೆಳೆದ ಲೆಫ್ಟಿನಂಟ್ ಜನರಲ್ ಹೂಡಾರಿಗೆ ಧನ್ಯವಾದ: ಕಾಂಗ್ರೆಸ್
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅತಿಯಾದ ಪ್ರಚಾರಕ್ಕೆ ಅಸಮಾಧಾನ
ಹೊಸದಿಲ್ಲಿ, ಡಿ.8: ಸರ್ಜಿಕಲ್ ದಾಳಿಯನ್ನು ರಾಜಕೀಯಗೊಳಿಸಲಾಗಿದೆ ಹಾಗೂ ಉತ್ಪ್ರೇಕ್ಷಿಸಲಾಗಿದೆ ಎಂದು ಮೋದಿ ಸರಕಾರದ ಅವಧಿಯಲ್ಲಿ 2016ರಲ್ಲಿ ಸರ್ಜಿಕಲ್ ದಾಳಿಗಳು ನಡೆದಾಗ ಸೇನೆಯ ನಾರ್ದರ್ನ್ ಕಮಾಂಡರ್ ಆಗಿದ್ದ ಡಿ .ಎಸ್. ಹೂಡಾ ಹೇಳಿದ್ದಾರೆ. ಇದೇ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿಯನ್ನು ಮತ್ತೆ ಟಾರ್ಗೆಟ್ ಮಾಡಿದ್ದಾರಲ್ಲದೆ ಪ್ರಧಾನಿ ಸರ್ಜಿಕಲ್ ದಾಳಿಗಳನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆಂದು ಆರೋಪಿಸಿದರು.
“ಜನರಲ್(ಡಿ ಎಸ್ ಹೂಡಾ) ನೀವು ನೈಜ ಜವಾನನಂತೆ ಮಾತನಾಡಿದ್ದೀರಿ. ಭಾರತಕ್ಕೆ ನಿಮ್ಮ ಬಗ್ಗೆ ಹೆಮ್ಮೆಯಿದೆ. ಮಿಸ್ಟರ್ 36( ಮೋದಿ) ಅವರಿಗೆ ನಮ್ಮ ಮಿಲಿಟರಿಯನ್ನು ವೈಯಕ್ತಿಕ ಆಸ್ತಿಯಂತೆ ಬಳಸಲು ಯಾವುದೇ ನಾಚಿಕೆಯಿಲ್ಲ. ಅವರು ಸರ್ಜಿಕಲ್ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಹಾಗೂ ರಫೇಲ್ ಒಪ್ಪಂದವನ್ನು ಅನಿಲ್ ಅಂಬಾನಿಯ ಬಂಡವಾಳವನ್ನು ರೂ 30,000 ಕೋಟಿಗೆ ಹೆಚ್ಚಿಸಲು ಉಪಯೋಗಿಸಿದ್ದಾರೆ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಕೂಡ ಟ್ವೀಟ್ ಮಾಡಿ ಪ್ರಧಾನಿ ಮೋದಿಯ ಅಗ್ಗದ ರಾಜಕೀಯವನ್ನು `ಬಯಲಿಗೆಳೆದಿದ್ದಕ್ಕಾಗಿ'' ಜನರಲ್ ಹೂಡಾ ಅವರಿಗೆ ಧನ್ಯವಾದ ಹೇಳಿದ್ದಾರೆ. “ಯಾರು ಕೂಡ ನಮ್ಮ ಧೀರ ಜವಾನರ ಶೌರ್ಯ ಮತ್ತು ಬಲಿದಾನಗಳನ್ನು ಅಗ್ಗದ ರಾಜಕೀಯ ಲಾಭ ಪಡೆಯಲು ಉಪಯೋಗಿಸಲು ಸಾಧ್ಯವಿಲ್ಲ. ದೇಶದ ಸುರಕ್ಷತೆ ಮತ್ತು ಹಿತಾಸಕ್ತಿಯ ಜತೆ ರಾಜಿ ಮಾಡಿಕೊಂಡು ಮೋದಿ ಅನಗತ್ಯವಾಗಿ ತಮ್ಮ ಎದೆ ತಟ್ಟಿಕೊಂಡು ಮಾತನಾಡುತ್ತಿದ್ದಾರೆ,'' ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.