ಬೆಂಗಳೂರು: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭದ್ರತಾ ಸಿಬ್ಬಂದಿಯ ಹತ್ಯೆ

ಬೆಂಗಳೂರು, ಡಿ.8: ಭದ್ರತಾ ಸಿಬ್ಬಂದಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಶಿವಕುಮಾರ್(28) ಕೊಲೆಯಾದ ಭದ್ರತಾ ಸಿಬ್ಬಂದಿ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಶಿವಕುಮಾರ್ ಕೋರಮಂಗಲದ ಸೋನಿ ವರ್ರ್ಡ್ ಸಮೀಪ ವಾಸವಾಗಿದ್ದರು. ಮೂಲತಃ ಉತ್ತರ ಪ್ರದೇಶದ ಸೌರಬ್ ರಾಯ್(24) ಎಂಬಾತ ಶಿವಕುಮಾರ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ. ಕರ್ತವ್ಯದ ವೇಳೆ ಶಿವಕುಮಾರ್, ಸೌರಬ್ ಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ರಾತ್ರಿ ವಿವೇಕನಗರ ಔಟರ್‌ರಿಂಗ್ ರಸ್ತೆಯಲ್ಲಿ ಶಿವಕುಮಾರ್ ಹೋಗುತ್ತಿದ್ದಾಗ, ಸೌರಬ್ ಆತನನ್ನು ತಡೆದು ನಿಲ್ಲಿಸಿ ಜಗಳವಾಡಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ವಿವೇಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆರೋಪಿ ಸೌರಬ್ ರಾಯ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ವಿವೇಕನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







