ವೈದ್ಯರ ತಪ್ಪಿಗೆ ಆರೋಗ್ಯ ಸಚಿವರೇ ಗುರಿ: ಎಸ್.ಶಿವಾನಂದ ಪಾಟೀಲ್
ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು, ಡಿ.8: ವೈದ್ಯರ ತಪ್ಪಿಗೆ ಆರೋಗ್ಯ ಸಚಿವರನ್ನೇ ಗುರಿಯಾಗಿಸಿ ಸಾರ್ವಜನಿಕರು ಟೀಕೆ ಮಾಡುತ್ತಿದ್ದಾರೆ. ಇಂತಹ ಟೀಕೆಗಳು ಬಾರದಂತೆ ವೈದ್ಯರು ಕರ್ತವ್ಯ ನಿರ್ವಹಿಸುವುದು ಅತ್ಯಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಎಸ್.ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಶನಿವಾರ ನಗರದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕ ಆಸ್ಪತ್ರೆಗಳ ಆರೋಗ್ಯ ಸೌಲಭ್ಯ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯಕ್ಕಾಗಿ ನೀಡುವ ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ವೈದ್ಯರು ಮಾಡುವ ಸಣ್ಣ-ಪುಟ್ಟ ತಪ್ಪಿಗಾಗಿ ಸಾರ್ವಜನಿಕರು ಆರೋಗ್ಯ ಸಚಿವರನ್ನೇ ಟೀಕೆ ಮಾಡುತ್ತಾರೆ. ಹೀಗಾಗಿ, ಸಾಮಾನ್ಯ ಜನರ ಮನಸ್ಸು ಗೆಲ್ಲುವ ನಿಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆಗಳು ಸೇವೆ ಸಲ್ಲಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗಾಗುತ್ತಿರುವ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಸರಕಾರಿ ವೈದ್ಯರು ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.
ರಾಜ್ಯ ಸರಕಾರದಿಂದಲೂ ಸರಕಾರಿ ಆಸ್ಪತ್ರೆಗಳಿಗೆ ಹೆಚ್ಚು ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು. ಸರಕಾರದ ವತಿಯಿಂದ ಈಗಾಗಲೇ 400 ವೈದ್ಯರ ನೇಮಕ ಹಾಗೂ ಹೆಚ್ಚು ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಜಿಲ್ಲಾಸ್ಪತ್ರೆಗಳಿಗೆ 1ರಿಂದ 1.50 ಕೋಟಿ ಅನುದಾನ ಒದಗಿಸಲಾಗಿದೆ. ವೈದ್ಯರು ಹೆಚ್ಚು ಶ್ರಮ ವಹಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ನೀಡುವ ಚಿಕಿತ್ಸೆಗಳಿಗಾಗಿ ಪ್ರಸ್ತುತ ವೈದ್ಯರಿಗೆ ದೊರೆಯುತ್ತಿರುವ ಶೇ.10 ಗೌರವ ಧನವನ್ನು ಶೇ.30ಕ್ಕೇರಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ. ಬಿಜಾಪುರ ಸರಕಾರಿ ಆಸ್ಪತ್ರೆಯಲ್ಲಿ 1050 ಹೆರಿಗೆಗಳನ್ನು ಮಾಡಿಸಿರುವ ಮಾದರಿಯಲ್ಲಿ ಇತರ ಆಸ್ಪತ್ರೆಗಳಲ್ಲಿಯೂ ಎಲ್ಲ ರೀತಿಯ ಸೇವೆಗಳು ಹೆಚ್ಚಳಗೊಳ್ಳಬೇಕು ಎಂದರು.
ವೇದಿಕೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಜಾವೇದ್ ಅಖ್ತರ್, ಆರೋಗ್ಯ ಇಲಾಖೆಯ ಆಯುಕ್ತ ಡಾ. ಪಂಕಜ್ ಕುಮಾರ್ ಪಾಂಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ.ರತನ್ ಕೇಲ್ಕರ್, ಡಾ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
- 2,678 ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಕಾಯಕಲ್ಪಅನುಷ್ಠಾನ
- 91 ಆಸ್ಪತ್ರೆಗಳಿಗೆ ರಾಷ್ಟ್ರೀಯ ಗುಣಮಟ್ಟ ಖಾತ್ರಿ ಪ್ರಮಾಣ ಪತ್ರ
- 290 ಆರೋಗ್ಯ ಕೇಂದ್ರಗಳಿಗೆ ಪ್ರಶಸ್ತಿ
- 18 ಜಿಲ್ಲಾಸ್ಪತ್ರೆಗಳಿಗೆ ಕಾಯಕಲ್ಪಪ್ರಶಸ್ತಿ
- 16 ಜಿಲ್ಲಾಸ್ಪತ್ರೆಗಳಿಗೆ ಸಮಾಧಾನಕರ ಪ್ರಶಸ್ತಿ
- ಮೊದಲ ಬಹುಮಾನ: ಹಾಸನದ ಚಾಮರಾಜೇಂದ್ರ ಆಸ್ಪತ್ರೆ
- ಎರಡನೇ ಬಹುಮಾನ: ಬಳ್ಳಾರಿ ಜಿಲ್ಲಾಸ್ಪತ್ರೆ







