ಉಡುಪಿ ಜಿಲ್ಲೆಯ ಮರಳು ಸಮಸ್ಯೆ ಪರಿಹಾರಕ್ಕೆ 15 ದಿನಗಳ ಗಡುವು: ಮತ್ತೆ ಅಹೋರಾತ್ರಿ ಧರಣಿ ಆರಂಭ- ರಘುಪತಿ ಭಟ್

ಉಡುಪಿ, ಡಿ. 8: ಮುಂದಿನ 15 ದಿನಗಳೊಳಗೆ 170 ಮಂದಿಗೆ ಮರಳು ತೆಗೆಯಲು ಪರವಾನಿಗೆ ನೀಡುವ ಮೂಲಕ ಜಿಲ್ಲೆಯಲ್ಲಿನ ಮರಳಿನ ಸಮಸ್ಯೆ ಬಗೆಹರಿಸದಿದ್ದರೆ ಮತ್ತೆ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ದಿಬ್ಬ ಗುರುತಿಸುವ ಬೆಥಮೆಟ್ರಿಕ್ ಸರ್ವೆ ನಡೆಸಿ 25ಲಕ್ಷ ಟನ್ ಮರಳನ್ನು ಗುರುತಿಸಲಾಗಿದ್ದು, ಇದನ್ನು ಜಿಲ್ಲಾಡಳಿತ ಈವರೆಗೆ ರಾಜ್ಯ ಪರಿಸರ ಸಮಿತಿಗೆ ಕಳುಹಿಸಿಕೊಟ್ಟಿಲ್ಲ. ಆ ಸಮಿತಿಯಲ್ಲಿ ಅನುಮೋದನೆಯಾಗದೆ ಜಿಲ್ಲೆ ಯಲ್ಲಿರುವ ಏಳು ಮಂದಿಯ ಸಮಿತಿಗೆ ಏನು ಮಾಡಲು ಆಗುವುದಿಲ್ಲ. ಆದುದರಿಂದ ಈ ಬಗ್ಗೆ ಸರಕಾರವು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ವಿನಾಕರಣ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಕೇಂದ್ರ ಪರಿಸರ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪರವಾನಿಗೆ ನೀಡುವ ಎಲ್ಲ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ನೀಡಲಾಗಿದೆ. ಸದ್ಯಕ್ಕೆ ಕೇಂದ್ರದಲ್ಲಿ ಎಲ್ಲವೂ ಕ್ಲೀಯರ್ ಆಗಿದ್ದು, ಯಾವುದೇ ಸಮಸ್ಯೆ ಇಲ್ಲ. ಆದರೂ ರಾಜ್ಯ ಸರಕಾರ ಈ ವಿಚಾರದಲ್ಲಿ ಮೀನ ಮೇಷ ಎಣಿಸುತ್ತಿದೆ ಎಂದು ಅವರು ದೂರಿದರು.
ದೋಣಿಗಳಿಗೆ ಜಿಪಿಎಸ್ ಅಳವಡಿಸಿರುವುದೇ ಅವೈಜ್ಞಾನಿಕ. ಇದೀಗ ಜಿಲ್ಲಾ ಡಳಿತ ಈ ಹಿಂದೆ ಎರಡು ಬಾರಿ ನಿಯಮ ಉಲ್ಲಂಘಿಸಿದವರೆಗೆ ಪರವಾನಿಗೆ ನೀಡುವುದಿಲ್ಲ ಎಂದು ತಗಾದೆ ತೆಗೆಯುತ್ತಿದೆ. ಇದನ್ನು ನಾವು ಒಪ್ಪುದಿಲ್ಲ. 170 ಮಂದಿಗೆ ಪರವಾನಿಗೆ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಜಿಲ್ಲಾಡಳಿತ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಜಿಲ್ಲೆಯಲ್ಲಿ ಸಂಪ್ರದಾಯಿಕ ಮರಳು ತೆಗೆಯುವ ಜಾತಿ, ಸಮುದಾಯವೇ ಇಲ್ಲ ಎಂದು ತಿಳಿಸಿದೆ. ಈ ಮೂಲಕ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರವು ಕೇಂದ್ರ ಸರಕಾರದ ಮೂಲಕ ಮರಳು ತೆಗೆಯದಂತೆ ತಡೆಯೊಡ್ಡಲು ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಮರಳು ನೀತಿ ರಚನೆಗಾಗಿ ರಾಜ್ಯ ಸರಕಾರ ಸಂಪುಟ ಉಪಸಮಿತಿಯನ್ನು ರಚಿಸಿ ಎರಡು ತಿಂಗಳು ಕಳೆದರೂ ಸಮಿತಿ ಈವರೆಗೆ ಒಂದೇ ಒಂದು ಸಭೆ ಕರೆದಿಲ್ಲ. ಹಾಗಾಗಿ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಅಧಿಕಾರಿಗಳ ಮಟ್ಟ ದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್ ಸುವರ್ಣ, ಹೊಯ್ಗೆ ದೋಣಿ ಮಾಲಕರ ಸಂಘದ ಅಧ್ಯಕ್ಷ ಸುಧಾಕರ್ ಅಮೀನ್ ಪಾಂಗಾಳ, ಇಂಜಿನಿಯರ್ ಅಸೋಶಿಯೇಶನ್ ಪ್ರಮುಖರಾದ ಭಗವಾನ್ ದಾಸ್ ಮತ್ತು ಪಾಂಡುರಂಗ, ಕಟಪಾಡಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಉಪಸ್ಥಿತರಿದ್ದರು.







