ಪ್ರೀತಿ, ಶಾಂತಿ ಏಸು ಜತ್ತಿಗೆ ನೀಡಿದ ದೊಡ್ಡ ಕಾಣಿಕೆ: ಬಿಷಪ್
‘ಸಮಾಧಾನ ಮಹೋತ್ಸವ-2018’ ಚಾಲನೆ

ಉಡುಪಿ, ಡಿ.8: ಪ್ರೀತಿ ಮತ್ತು ಶಾಂತಿ ಪ್ರಭು ಏಸು ಈ ಜಗತ್ತಿಗೆ ನೀಡಿದ ಅತೀ ದೊಡ್ಡ ಕಾಣಿಕೆಯಾಗಿದೆ ಎಂದು ಉಡುಪಿ ಕೆಥೋಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೋ ಹೇಳಿದ್ದಾರೆ.
ಫೆಲೋಶಿಪ್ ಆಪ್ ಉಡುಪಿ ಡಿಸ್ಟ್ರಿಕ್ಟ್ ಚರ್ಚಸ್ ವತಿಯಿಂದ ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ‘ಸಮಾಧಾನ ಮಹೋತ್ಸವ’(ಪೆಸ್ಟಿವಲ್ ಆಪ್ ಪೀಸ್)ವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ನೀಡಿದ ಸಂದೇಶದಲ್ಲಿ ಅವರು ತಿಳಿಸಿದರು.
ಈ ಜಗತ್ತಿನಲ್ಲಿ ದ್ವೇಷ, ಅಸೂಯೆಗಳು ವ್ಯಾಪಕವಾಗಿವೆ. ಇಂತಹ ಸಂದರ್ಭ ದಲ್ಲಿ ಶಾಂತಿ, ಸಮಾಧಾನ ಮತ್ತು ಪ್ರೀತಿಯ ಅಗತ್ಯವಿದೆ. ‘ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು’ ಎಂದು ಪ್ರಭು ಏಸು ಹೇಳಿದ್ದಾರೆ. ಪ್ರತಿಯೊಬ್ಬರ ಮನೆ-ಮನಗಳಲ್ಲಿ ಶಾಂತಿ ನೆಲೆಸುವುದಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಉಡುಪಿ ಬಿಷಪ್ ಹೇಳಿದರು.
ಚೆನ್ನೈನ ಅ.ವಂ. ಸ್ಯಾಮ್ ಪಿ. ಚೆಲ್ಲದೊರೈ ದೇವರವಾಕ್ಯದ ಮುಖ್ಯ ಸಂದೇಶ ನೀಡಿದರು. ಉಡುಪಿ ಡಿಸ್ಟ್ರಿಕ್ಟ್ ಫುಲ್ ಗೋಸ್ಪೆಲ್ ಪಾಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಪಾಸ್ಟರ್ ಜೋಸೆಫ್ ಜಮಖಂಡಿ, ದ.ಕ, ಕೊಡಗು ಮತ್ತು ಉಡುಪಿ ಜಿಲ್ಲಾ ಯುನೈಟೆಡ್ ಬಾಸೆಲ್ ಮಿಷನ್ ಅಧ್ಯಕ್ಷ ಜಯಪ್ರಕಾಶ್ ಸೈಮನ್, ಮಂಜುಳಾ, ಜಾನ್ ಅಬ್ರಹಾಂ ಉಪಸ್ಥಿತರಿದ್ದರು.
ಸುಚೇತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. 200 ಸದಸ್ಯರ ಗಾಯನ ಮಂಡಳಿಯಿಂದ ವಿಶೇಷ ಕೂಟ ಜರಗಿತು. ಪ್ರತಿ ಎರಡು ವರ್ಷ ಗಳಿಗೊಮ್ಮೆ ನಡೆಯುವ ಈ ಸಮಾಧಾನ ಮಹೋತ್ಸವ ಕಾರ್ಯಕ್ರಮ ಈ ಬಾರಿ ಡಿ.9ರವರೆಗೆ ಸಂಜೆ 5:30ಕ್ಕೆ ಪ್ರಾರಂಭಗೊಂಡು ರಾತ್ರಿ 8:30ರವರೆಗೆ ನಡೆಯುತ್ತದೆ.