35 ಸಾವಿರ ಕೋಟಿ ರೂ.ಲೆಕ್ಕ ಕುರಿತು ಸದನ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಲಿ: ಸಿ.ಟಿ.ರವಿ ಆಗ್ರಹ

ಬೆಂಗಳೂರು, ಡಿ.8: ಸರಕಾರದಲ್ಲಿ 35 ಸಾವಿರ ಕೋಟಿ ರೂ.ಗೆ ಲೆಕ್ಕ ಇಲ್ಲದಿರುವುದರ ಕುರಿತು ಸಿಎಜಿ ವರದಿ ನೀಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸದನ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 35 ಸಾವಿರ ಕೋಟಿ ರೂ.ಲೆಕ್ಕ ಇಲ್ಲದಿರುವುದರ ಬಗ್ಗೆ ಸಿಎಜಿ ನೀಡಿದ್ದ ವರದಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಇದರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಲಘುವಾಗಿ ಪ್ರತಿಕ್ರಿಯಿಸಿರುವುದು ಸರಿಯಲ್ಲ. ಜನರ ಹಣಕ್ಕೆ ಲೆಕ್ಕ ಇಡುವುದು ಸರಕಾರ ನಡೆಸುವವರ ಕರ್ತವ್ಯ. ಹೀಗಾಗಿ ಕೂಡಲೇ ಸದನ ಸಮಿತಿ ರಚಿಸಿ ತನಿಖೆಗೆ ವಹಿಸಬೇಕು ಎಂದರು.
ಶಾಲಾ ಮಕ್ಕಳಿಗೆ 2ನೇ ಸಮವಸ್ತ್ರ ನೀಡದಿರುವುದರ ಬಗ್ಗೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿಲ್ಲವೆಂದು ಆರೋಪ ಮಾಡಲಾಗಿದೆ. ಆದರೆ, ಕೇಂದ್ರದ ಪಾಲಿನ ಹಣವನ್ನು ಕೊಡಲಾಗಿದೆ. ಈ ಹಣವನ್ನು ಇತರೆ ಕಾರ್ಯಕ್ರಮಗಳಿಗೆ ಬಳಸಿಕೊಂಡಿರುವ ಮೈತ್ರಿ ಸರಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.
ಬೆಳಗಾವಿ ಅಧಿವೇಶನಕ್ಕೆ ಬಿಜೆಪಿ ತಯಾರಿ ಮಾಡಿಕೊಂಡಿದೆ. ಅಧಿವೇಶನದ ಒಳಗೆ ಹಾಗೂ ಹೊರಗೆ ರೈತರೊಂದಿಗೆ ಸೇರಿ ಸರಕಾರದ ವಿರುದ್ಧ ಹೋರಾಟ ಮಾಡಲಾಗುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಪ್ರಶ್ನಿಸದೆ ಬಿಡುವುದಿಲ್ಲವೆಂದು ಅವರು ಹೇಳಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ಎಂದು ಮಾಧ್ಯಮ ಸಮೀಕ್ಷೆಗಳಲ್ಲಿ ಬಂದಿದೆ. ಆದರೆ, ಎಲ್ಲಾ ಸಮಯದಲ್ಲೂ ಸಮೀಕ್ಷೆ ನಿಜವಾಗಲ್ಲ. ಉತ್ತರ ಪ್ರದೇಶದಲ್ಲಿ ನಮಗೆ 323 ಸ್ಥಾನ ಬರುತ್ತೆ ಅಂತ ಯಾವ ಸಮೀಕ್ಷೆಯೂ ಹೇಳಿರಲಿಲ್ಲ. ಅದೇ ರೀತಿ ಕರ್ನಾಟಕದಲ್ಲಿ ಕೂಡ 70-80 ಸ್ಥಾನ ಮಾತ್ರ ಗೆಲ್ಲುತ್ತೆ ಅಂತ ಬಂದಿತ್ತು ಆದರೆ ನಾವು 104 ಸ್ಥಾನಕ್ಕೆ ಬಂದಿದ್ದೇವೆ ಎಂದು ಅವರು ಅಭಿಪ್ರಾಯಿಸಿದರು.
ಪಕ್ಷ ಸೂಚಿಸಿದರೆ ಸ್ಪರ್ಧೆ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿ ನಾನಲ್ಲ. ನಾನು ಚಿಕ್ಕಮಗಳೂರು ಶಾಸಕ, ಇನ್ನೂ ನಾಲ್ಕು ವರ್ಷ ನನ್ನ ಶಾಸಕ ಸ್ಥಾನದ ಅವಧಿಯಿದೆ. ಆದರೆ, ಪಕ್ಷ ಸ್ಪರ್ಧೆ ಮಾಡಬೇಕು ಎಂದು ಸೂಚನೆ ನೀಡಿದರೆ ರಾಜ್ಯದ ಯಾವುದೇ ಕ್ಷೇತ್ರದಿಂದ ಬೇಕಾದರೂ ಸ್ಪರ್ಧೆ ಮಾಡುತ್ತೇನೆ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಆದೇಶ ಪಾಲನೆ ಮಾಡುತ್ತೇನೆ.
-ಸಿ.ಟಿ.ರವಿ, ಬಿಜೆಪಿ ಮುಖಂಡ







