ಸಾಮಾಜಿಕ ಜಾಲತಾಣ ಬಳಕೆಯಿಂದ ಯುವಜನತೆಗೆ ಮಾನಸಿಕ ಸಮಸ್ಯೆ: ರವಿ ಡಿ.ಚೆನ್ನಣ್ಣನವರ್

ಬೆಂಗಳೂರು, ಡಿ.8: ಇತ್ತೀಚಿನ ದಿನಗಳಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲೆ ಸಮಯ ಕಳೆಯುತ್ತಿರುವುದರಿಂದ ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ಡಿಸಿಪಿ ರವಿ ಚನ್ನಣ್ಣನವರ್ ಆತಂಕ ವ್ಯಕ್ತಪಡಿಸಿದರು.
ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಎಚ್.ಬಿ.ಕಾಲೇಜ್ ಆಫ್ ಕಮ್ಯುನಿಕೇಷನ್ ಅಂಡ್ ಮ್ಯಾನೇಜ್‌ಮೆಂಟ್ ಬೆಂಗಳೂರು ಮತ್ತು ಶಿವಮೊಗ್ಗ ಮಾನಸ ಎಜುಕೇಶನಲ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್ ಸಹಯೋಗದಲ್ಲಿ ಆಯೋಜಿಸಿದ್ದ ಕೌನ್ಸಿಲಿಂಗ್ ಕೋರ್ಸ್‌ನ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುವುದರಿಂದ ದಾರಿ ತಪ್ಪುತ್ತಿದ್ದಾರೆ. ದೇಶದಲ್ಲಿ ಅಂತರ್ಜಾಲ ಬಳಕೆಯಿಂದಾಗಿ ಪ್ರತಿ ಆರು ಜನರಲ್ಲಿ ಒಬ್ಬರು ಮಾನಸಿಕ ತೊಂದರೆಗೆ ಒಳಗಾಗುತ್ತಿದ್ದಾರೆ. ಈಗಲೇ ಅವರು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಇಲ್ಲವೇ ತಮ್ಮ ತಂದೆ-ತಾಯಿಗಳ ಹತ್ತಿರ ಹೇಳಿಕೊಂಡು ತಮಗಾಗುತ್ತಿರುವ ಸಮಸ್ಯೆಯ ಬಗ್ಗೆ ತಿಳಿಸಿದರೆ ಅವರಿಗೆ ಸೂಕ್ತ ಮಾರ್ಗ ಕಂಡುಕೊಳ್ಳಲು ಅನುಕೂಲವಾಗುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂದಿನ ಯುವಜನತೆಗೆ ಮಾರ್ಗದರ್ಶನದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಸಂಘ, ಸಂಸ್ಥೆಗಳ ಜವಾಬ್ದಾರಿ ಹೆಚ್ಚಿದೆ. ತಮ್ಮ ಶಾಲಾ, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಪ್ರತಿ ವಿದ್ಯಾರ್ಥಿಯನ್ನು ಆಗಾಗ ಆಪ್ತ ಸಮಾಲೋಚನೆ ನಡೆಸುವ ಮೂಲಕ ಆರೋಗ್ಯಯುತ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ 50 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜೀವ್‌ಗಾಂಧಿ ಯುನಿವರ್ಸಿಟಿ ಆ್ ಹೆಲ್ತ್ ಸೈನ್ಸಸ್ ಉಪಾಧ್ಯಕ್ಷ ಡಾ.ಬಿ.ವಸಂತ ಶೆಟ್ಟಿ, ಮಾನಸ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಡಾ.ರಜನಿ, ಭಾರತೀಯ ವಿದ್ಯಾಭವನ ನಿರ್ದೇಶಕ ಎಚ್.ಎನ್. ಸುರೇಶ್, ಸಿ.ಎನ್.ಅಶೋಕ್ ಕುಮಾರ್ ಉಪಸ್ಥಿತರಿದ್ದರು.







