ಸ್ಮಾರಕಗಳಿವೆ; ಆದರೆ ಗಾಂಧಿ ಜನಮಾನಸದಿಂದ ದೂರ: ಡಾ.ತಿಂಗಳಾಯ

ಉಡುಪಿ, ಡಿ. 8: ಇಂದು ಗಾಂಧಿ ಪ್ರತಿಮೆ, ಗಾಂಧಿ ರಸ್ತೆ, ಗಾಂಧಿ ಬಜಾರ್ ಸೇರಿದಂತೆ ಗಾಂಧಿಯವರ ಸ್ಮಾರಕಗಳು ಊರಿನ ತುಂಬಾ ಇವೆ. ಆದರೆ ಗಾಂಧೀಜಿಯವರ ನೆನಪು, ಕೊಡುಗೆಗಳು ಮಾತ್ರ ಜನಮಾನಸದಿಂದ ಅಳಿಸಿ ಹೋಗುತ್ತಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ.ಎನ್.ಕೆ. ತಿಂಗಳಾಯ ಹೇಳಿದ್ದಾರೆ.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಬೊಳುವಾರು ಮಹಮ್ಮದ್ ಕುಂಞ ಅವರ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಹಾಗೂ ಡಾ.ಮಹಾಬಲೇಶ್ವರ ರಾವ್ ಅವರ ‘ಬರಿಯ ಬಟ್ಟೆಯಲ್ಲ ಭಾರತದ ಬಾವುಟ’ ಬಗ್ಗೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ತೋರಿಸಿದವರಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.
ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದಿಂದ ಭಾರತವಿಂದು ಸ್ವತಂತ್ರ ವಾಗಿದೆ. ಸ್ವಾತಂತ್ರ ಭಾರತದ ಮಕ್ಕಳು ದೇಶವನ್ನು ಮುನ್ನಡೆಸುವ ನಾಯಕರಾ ಗಬೇಕೇ ಹೊರತು ದುಶ್ಚಟಗಳಿಗೆ ಬಲಿಬೀಳುವಂತಾಗಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗಾಂಧೀಜಿ ಖಾದಿ ವಸ್ತುಗಳನ್ನು ತೊಡುವ ಹಾಗೂ ತಯಾರಿಸುವ ಮೂಲಕ ವಿದೇಶಿ ವಸ್ತುಗಳ ವಿರುದ್ಧ ಹೋರಾಟವನ್ನು ನಡೆಸಿದ್ದಾರೆ. ಇದು ನಮ್ಮ ಕಣ್ಣನ್ನು ತೆರೆಸಬೇಕು. ನಾವಿಂದು ಗಾಂಧಿಯನ್ನು ಮರೆಯುತಿದ್ದೇವೆ. ಗಾಂಧಿ ಕಂಡ ಕನಸು ದೇಶಕ್ಕೆ ಸ್ವಾತಂತ್ರ ಸಿಕ್ಕಿ 70 ವರ್ಷಗಳಾದರೂ ಇನ್ನೂ ನನಸಾಗಿಲ್ಲ ಎಂದರು.
ಇಂದಿನ ಯುವಜನತೆಗೆ ದೇಶದ ಇತಿಹಾಸ, ರಾಜಕೀಯದಲ್ಲಿ ಎಷ್ಟೊಂದು ಅಜ್ಞಾನವಿದೆ ಎಂದರೆ, ಮುಂದೊಂದು ದಿನ ‘ಗಾಂಧೀಜಿ ಈ ದೇಶದಲ್ಲಿ ಹುಟ್ಟಿಯೇ ಇರಲಿಲ್ಲ’ ಎಂದು ಪ್ರಚಾರವಾದರೂ ಆಶ್ಚರ್ಯವಿಲ್ಲ ಎಂದು ಡಾ. ತಿಂಗಳಾಯ ಲಘು ದಾಟಿಯಲ್ಲಿ ನುಡಿದರು.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಪ್ರೇಮ್‌ಕುಮಾರ್ ತಿಂಗಳಾಯ ಅವರು ತನ್ನ ತಾತ ಮೋನಪ್ಪ ತಿಂಗಳಾಯ ಹಾಗೂ ತಂದೆ ಕೃಷ್ಣಪ್ಪ ತಿಂಗಳಾಯ ಅವರು 1934ರ ಫೆ.24ರಂದು ಗಾಂಧೀಜಿ ಮಂಗಳೂರಿಗೆ ಬಂದಾಗ ಹೊಗೆ ಬಜಾರ್‌ನ ಜ್ಞಾನೋದಯ ಸಮಾಜ ಮಂದಿರದಲ್ಲಿ ಅವರ ಸಭೆ ಸಂಘಟಿಸಿದ್ದನ್ನು, ಅವರಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಾನಪತ್ರ ಅರ್ಪಿಸಿದ್ದನ್ನು ಗಾಂಧೀಜಿಯವರ ಹರಿಜನ ಫಂಡ್‌ಗೆ ಹಣ ಸಂಗ್ರಹಿಸಿ ನೀಡಿದ್ದನ್ನು ನೆನಪಿಸಿಕೊಂಡರು.
ಮುಂದೆ 1948ರಲ್ಲಿ ಗಾಂಧೀಜಿ ತೀರಿಕೊಂಡಾಗ, ಅವರ ಚಿತಾಭಸ್ಮವನ್ನು ಮಂಗಳೂರಿಗೆ ತರಿಸಿ ಇಲ್ಲಿನ ನೇತ್ರಾವತಿ, ಫಲ್ಗುಣಿ ಸಮುದ್ರ ಸಂಗಮದಲ್ಲಿ ವಿಸರ್ಜಿಸುವ ಮುನ್ನ ನಡೆಸಿದ ವಿಶೇಷ ಕಾರ್ಯಕ್ರಮಗಳನ್ನು ಸಹ ಮೆಲುಕು ಹಾಕಿದರು. ಅಲ್ಲದೇ ಜ್ಞಾನೋದಯ ಸಮಾಜ ಮಂದಿರದಲ್ಲಿ ಗಾಂಧಿ ಭಾಷಣ ಮಾಡಿದ ಜಾಗದಲ್ಲಿ ಅವರ ಪ್ರತಿಮೆ ಸ್ಥಾಪಿಸಿ ಈಗಲೂ ಅವರ ಜನ್ಮ ದಿನಾಚರಣೆ ಆಚರಿಸುತ್ತಿರುವುದನ್ನು ತಿಳಿಸಿದರು.
ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಹ ಸಂಘಟಕ ವಿನೀತಿ ರಾವ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ, ಸಿಂಡಿಕೇಟ್ ಬ್ಯಾಂಕಿನ ಜಿಎಂ ಭಾಸ್ಕರ ಹಂದೆ ಮಾತನಾಡಿದರು. ಬಿವಿಟಿಯ ಮುಖ್ಯ ಕಾರ್ಯನಿರ್ವಹಣಾದಿಕಾರಿ ಮನೋಹರ ಕಟ್ಗೇರಿ ಅತಿಥಿಗಳನ್ನು ಸ್ವಾಗತಿಸಿದರೆ, ಆಡಳಿತಾಧಿಕಾರಿ ಐ.ಜಿ.ಕಿಣಿ ವಂದಿಸಿದರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು.







