ಬಂಡಾಯ ಸಾಹಿತ್ಯ ಸಂಘಟನೆ ಪ್ರಗತಿಪರರನ್ನು ಒಗ್ಗೂಡಿಸುವ ವೇದಿಕೆ: ಬರಗೂರು ರಾಮಚಂದ್ರಪ್ಪ

ತುಮಕೂರು,ಡಿ.08: ಶೋಷಿತರು,ದಲಿತರು, ಬಡವರ ಪರವಾಗಿ ದುಡಿಯುತ್ತಿರುವ ಪ್ರಗತಿಪರ ಮನಸ್ಸುಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಒಂದು ವೇದಿಕೆಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಮಾಕಂ ಕಲ್ಯಾಣ ಮಂಟಪದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ-ಕರ್ನಾಟಕ ಆಯೋಜಿಸಿದ್ದ ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ಎಂಬ ರಾಜ್ಯ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಡವಾಳ ಶಾಹಿಗಳಿಗೆ ಪ್ರತಿರೋಧ ಒಡ್ಡುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ನಡೆಯಲಿವೆ ಎಂದರು.
ಇಂದಿನ ಕಾರ್ಯಾಗಾರವನ್ನು ಉದ್ಘಾಟಿಸಿದ ಪಿ.ಸಾಯಿನಾಥ್ ಅವರ ಪ್ರಕಾರ ರೈತರೆಂದರೆ ಕೇವಲ ಭೂಮಿ ಹೊಂದಿರುವವಲ್ಲ. ಕೃಷಿಯಲ್ಲಿ ತೊಡಗಿಕೊಂಡಿರುವ ಕೂಲಿಯಾಳುಗಳು, ಮಹಿಳೆಯರು ಎಲ್ಲರನ್ನು ಒಳಗೊಂಡ ವಿಶಾಲ ಅರ್ಥವಿದೆ. ಆದರೆ ಕೃಷಿಕರೆಂದರೆ ಕೇವಲ ಭೂಮಿ ಹೊಂದಿರುವವರು ಮಾತ್ರ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ದುರಂತ. ಹಾಗೆಯೇ ಬಂಡಾಯವೆಂದರೆ ಬದಲಾವಣೆ ಎಂದರ್ಥ. ಆದರೆ, ಭಿನ್ನಮತವನ್ನು ಬಂಡಾಯವೆಂದೇ ಇತ್ತೀಚಿಗೆ ಅಪವ್ಯಾಖಾನ ಮಾಡಲಾಗುತ್ತಿದೆ. ಈ ಕಾರ್ಯಾಗಾರದ ಮೂಲಕ ಯುವ ಪತ್ರಕರ್ತರ ದೃಷ್ಟಿಕೋನ ಹೇಗಿರಬೇಕು, ಅವರು ಹೇಗೆ ಉಳ್ಳುವರು ಮತ್ತು ಇಲ್ಲದವರ ನಡುವಿನ ಕೊಂಡಿಯಾಗಿ ಕೆಲಸ ಮಾಡಬೇಕೆಂದು ಚರ್ಚಿಸಲಾಗುತ್ತಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ನುಡಿದರು.
ಪ್ರಗತಿಪರ ಚಿಂತಕರಾದ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಮಾತನಾಡಿ, ಅಮಾನವೀಯತೆ, ಶೋಷಣೆ, ದಬ್ಬಾಳಿಕೆ ವಿರುದ್ಧ ಹೋರಾಟ ರೂಪಿಸುವುದೇ ನಿಜವಾದ ಬಂಡಾಯ. ಅದು ಹಿಂದೆದಿಗಿಂತಲೂ ಇಂದು ಪ್ರಸ್ತುತವಾಗಿದೆ ಎಂದರು.
ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಪ್ರಜ್ಞೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಜಿ.ಎನ್.ಮೋಹನ್ ಅವರು, ಉಳ್ಳವರು ಮತ್ತು ಇಲ್ಲದವರ ನಡುವಿನ ಕೊಂಡಿಯಾಗಿದ್ದ ಮಾಧ್ಯಮಗಳು ಇಂದು ಕೊಳ್ಳುವವರು ಮತ್ತು ಉದ್ದಿಮೆದಾರರ ನಡುವಿನ ಸೇತುವೆಯಾಗಿ ಮಾರ್ಪಾಡಾಗಿರುವುದು ದುರಂತವೇ ಸರಿ. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಫಲವಾಗಿ ಓದುಗರು ಗ್ರಾಹಕರಾಗಿ ಬದಲಾಗಿದ್ದು, ಇದು ಬದಲಾಗಬೇಕೆಂಬ ದುಡಿತ ಹೊಂದಿರುವ ಎಲ್ಲರೂ ಒಗ್ಗೂಡಿ, ಕೇರಳದ ಮಾದರಿಯಲ್ಲಿ ಸಹಕಾರಿ ಮಾಧ್ಯಮ ಸಂಸ್ಥೆಯೊಂದನ್ನು ಹುಟ್ಟು ಹಾಕುವ ಅನಿವಾರ್ಯತೆ ಕರ್ನಾಟಕದಲ್ಲಿದೆ. ಮಾಧ್ಯಮದ ಏಕಸಾಮ್ಯತೆಯ ವಿರುದ್ಧ ಪ್ರತಿರೋಧ ಒಡ್ಡಬೇಕಿದೆ ಎಂದರು.
ವೇದಿಕೆಯಲ್ಲಿ ಕೆ.ದೊರೈರಾಜು, ಪ್ರೊ.ರಾಜಪ್ಪ ದಳವಾಗಿ, ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು. ನಾಡಿನ ಮೂಲೆ ಮೂಲೆಗಳಿಂದ ನೂರಾರು ಯುವ ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ಆಗಮಿಸಿದ್ದರು.







