ಡಿ.10-11: ವಿಭಿನ್ನ ಪ್ರಯೋಗದ ನಾಟಕಗಳ ಪ್ರದರ್ಶನ
ಉಡುಪಿ, ಡಿ.8: ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ, ಸಾಮಾಜಿಕ ಸಂಸ್ಥೆ ಅಮೋಘ ವತಿಯಿಂದ ತುಳು ರಂಗಭೂಮಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಥಾಕೂಲಾಜ್ ಸೇರಿದಂತೆ ಎರಡು ವಿಭಿನ್ನ ನಾಟಕ ಪ್ರದರ್ಶನ ನಡೆಯಲಿದೆ ಎಂದು ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಚೌಟರ ‘ಕರಿಯಜ್ಜೆರೆನ ಕಥೆಕುಲು’ ಎಂಬ ಕಥಾ ಸಂಕಲನದಿಂದ ‘ಬೈತರಿತ ಪುಂಡಿಲ ಗಾಂಧಿ ಅಜ್ಜೆರ್‌ಲಾ’, ‘ಸೂತಕ’ ಹಾಗೂ ‘ಗಡಿತ ಬೂಳ್ಯ’ ಎಂಬ ಮೂರು ಕಥೆಗಳನ್ನು ನೇರವಾಗಿ ದೃಶ್ಯ ಸಂಸ್ಕೃತಿಗೆ ಅಳವಡಿಸಲಾಗಿದೆ ಎಂದರು. ಅದೇ ರೀತಿ ತುಳುನಾಡಿನ ಮಣ್ಣಿನ ಶಕ್ತಿ, ಸಿರಿಯ ಬದುಕನ್ನು ಆಧರಿಸಿ ಪೂರ್ಣಿಮಾ ಸುರೇಶ್ ‘ಸತ್ಯನಾಪುರದ ಸಿರಿ’ ಎಂಬ ಏಕವ್ಯಕ್ತಿ ಪ್ರಯೋಗವನ್ನು ಪ್ರಸ್ತುತ ಪಡಿಸಲಿರುವರು. ಈ ಎರಡು ನಾಟಕಗಳಿಗೆ ಸಂಗೀತ, ನಿರ್ದೇಶನ ಮತ್ತು ವಿನ್ಯಾಸವನ್ನು ಕೃಷ್ಣಮೂರ್ತಿ ಕವತ್ತಾರ್ ನೀಡಲಿರುವರು.
ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಡಿ.10ರಂದು ಸಂಜೆ 6ಗಂಟೆಗೆ ‘ಕರಿಯಜ್ಜೆರೆನ ಕಥೆಕುಲು’ ಮತ್ತು 11ರಂದು ಸಂಜೆ 6ಗಂಟೆಗೆ ಸತ್ಯನಾಪುರದ ಸಿರಿ ನಾಟಕಗಳು ಪ್ರದರ್ನಗೊಳ್ಳಲಿವೆ.
ಸುದ್ದಿಗೋಷ್ಠಿಯಲ್ಲಿ ಪೂರ್ಣಿಮಾ ಸುರೇಶ್, ಅಮೋಘ ನಿರ್ದೇಶಕ ಕುಯಿ ಲಾಡಿ ಸುರೇಶ್ ನಾಯಕ್, ಅವಿನಾಶ್ ಉಪಸ್ಥಿತರಿದ್ದರು.