ಬೆಳಗಾವಿ ಅಧಿವೇಶನದಲ್ಲಿ ಗ್ರಾಪಂ ನೌಕರರ ಬೇಡಿಕೆ ಜಾರಿಗೆ ಆಗ್ರಹ
ಉಡುಪಿ, ಡಿ.8: ಗ್ರಾಪಂ ನೌಕರರ ಅನೇಕ ಸಮಸ್ಯೆಗಳಿಗೆ ಪರಿಹಾರ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಇವುಗಳನ್ನು ಜಾರಿಗೆ ತರಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಶ್ರೇಯೋಭಿವೃದ್ಧಿ ಸಂಘ ಒತ್ತಾಯಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ, ಗ್ರಾಪಂ ಕಚೇರಿಯಲ್ಲಿ ಕೆಲಸ ಮಾಡುವ ಗುಮಾಸ್ತರು, ಕರವಸೂಲಿಗಾರ, ಕ್ಲರ್ಕ್, ಡಾಟ ಎಂಟ್ರಿ ಅಪರೇಟರ್ ಹುದ್ದೆ ಗಳನ್ನು ಗ್ರೂಪ್ ಸಿ ಮತ್ತು ಪಂಪ್ ಚಾಲಕ, ನೀರು ಗಂಟಿ, ಜವಾನರು ಹಾಗೂ ಶುಚಿತ್ವ ನೌಕರರ ಹುದ್ದೆಗಳನ್ನು ಗ್ರೂಪ್ ಡಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸ ಬೇಕು ಎಂದು ಆಗ್ರಹಿಸಿದರು.
ಕಳೆದ ಹಲವು ವರ್ಷಗಳಿಂದ ಪಂಚಾಯತ್‌ರಾಜ್ ಇಲಾಖೆಯಲ್ಲಿ ಶ್ರದ್ಧೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಯನ್ನು ನೀಡಬೇಕು. ಬಡ ಗ್ರಾಪಂ ನೌಕರರ ಹಿತ ಕಾಪಾಡಬೇಕು. ಮುಂದಿನ ಎಲ್ಲ ನೇಮಕಾತಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಗ್ರಾಪಂ ಕಚೇರಿಗಳಲ್ಲಿ ಕ್ರಮಬದ್ಧವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಮಾಡಿ ಜಿಪಂ ಅನುಮೋದನೆ ನೀಡಬೇಕು.
ಎಲ್ಲ ಗ್ರಾಪಂ ಸಿಬ್ಬಂದಿಗಳಿಗೆ ಇ-ಎಫ್‌ಎಂಎಸ್ ಮೂಲಕ ನೇರವಾಗಿ ವೇತನ ಪಾವತಿಸಬೇಕು. ಅದರೊಂದಿಗೆ ಭವಿಷ್ಯನಿಧಿ ಇಎಸ್‌ಐ ಮತ್ತು ಇತರ ಸೌಲಭ್ಯಗಳನ್ನು ನೀಡಬೇಕು. ಗ್ರಾಪಂ ಕಚೇರಿಗಳಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವ ನೌಕರರಿಗೆ ಸೇವಾ ಮುಂಬಡ್ತಿಗೆ ಐದು ವರ್ಷದ ಸೇವೆಯನ್ನು ಪರಿಗಣಿಸಬೇಕು. ನೌಕರರಿಗೆ ಸೇವಾ ಅವಧಿಯಲ್ಲಿ ಮರಣ ಹೊಂದಿದರೆ 20ಲಕ್ಷ ರೂ. ಮತ್ತು ಶಾಶ್ವತ ಅಂಗವಿಕಲತೆ ಹೊಂದಿದರೆ 10ಲಕ್ಷ ರೂ.ವರೆಗೆ ಪರಿಹಾರ ನೀಡಬೇಕು.
ನೌಕರರ ವೃಂದದಿಂದ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಮುಂಭಡ್ತಿ ನೀಡುವ ಮೀಸಲಾತಿಯನ್ನು ಶೇ.30ರಿಂದ ಶೇ.90ಕ್ಕೆ ಹೆಚ್ಚಿಸಬೇಕು. ಕಳೆದ 8-10ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕ್ಲರ್ಕ್/ಕ್ಲರ್ಕ್ ಕಮ್ ಡಾಟ ಎಂಟ್ರಿ ಅಪರೇಟರ್ ಮತ್ತು ಬಿಲ್ ಕಲೆಕ್ಟರ್‌ಗಳಿಗೆ ಶೇ.90ರಷ್ಟು ಮುಂಬಡ್ತಿ ನೀಡಬೇಕು. ಕೆಲಸದಿಂದ ವಜಾ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಹೊರಗುತ್ತಿಗೆ ಆಧಾರಿತ ಡಾಟ ಎಂಟ್ರೀ ಆಪರೇಟರ್‌ಗಳಿಗೆ ನ್ಯಾಯ ಒದಗಿಸ ಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕುಲಾಲ್, ದ.ಕ. ಜಿಲ್ಲಾಧ್ಯಕ್ಷೆ ಮೋಹಿನಿ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷ ಉದಯ ಶೆಟ್ಟಿ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಗಂಗಾಧರ ನಾಯ್ಕ ಉಪಸ್ಥಿತರಿದ್ದರು.