ಉಡುಪಿ: ಪತ್ನಿಗೆ ಕ್ರಿಕೆಟ್ ಬ್ಯಾಟಿನಿಂದ ಹಲ್ಲೆಗೈದ ಎಎಸ್ಸೈ
ದೂರು ದಾಖಲು

ಉಡುಪಿ, ಡಿ.8: ಉಡುಪಿ ಎಸ್ಪಿ ಕಚೇರಿಯಲ್ಲಿರುವ ನಿಸ್ತಂತು ವಿಭಾಗದ ಪೊಲೀಸ್ ಸಹಾಯಕ ಉಪನಿರೀಕ್ಷಕ ಕೆ.ಎಸ್.ಹರಿಶ್ಚಂದ್ರ ಎಂಬವರು ತನ್ನ ಪತ್ನಿಗೆ ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಗಾಯಗೊಳಿಸಿರುವ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದವರನ್ನು ಮಣಿಪಾಲ ಅನಂತನಗರದಲ್ಲಿರುವ ಪೊಲೀಸ್ ವಸತಿಗೃಹದ ನಿವಾಸಿ ಎ.ಬಿ.ಸುಧಾ (40) ಎಂದು ಗುರುತಿಸಲಾಗಿದೆ.
ಇವರು ಕೆ.ಎಸ್.ಹರಿಶ್ಚಂದ್ರರನ್ನು 2001ರಲ್ಲಿ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ದಿನದಿಂದ ಹರಿಶ್ಚಂದ್ರ ಸಣ್ಣಪುಟ್ಟ ವಿಚಾರಗಳಿಗೆ ಪತ್ನಿ ಜೊತೆ ಜಗಳ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರೆಂದು ದೂರಲಾಗಿದೆ.
ಸುಧಾ ಡಿ. 7ರಂದು ಬೆಳಗ್ಗೆ ಪತಿಯ ಮೊಬೈಲ್ ನೋಡಿ ನೀವು ಯಾಕೆ ಬೇರೆ ಹೆಂಗಸರೊಂದಿಗೆ ಚಾಟಿಂಗ್ ಮಾಡಿದ್ದು ಎಂದು ಕೇಳಿದ್ದು, ಇದರಿಂದ ಕೋಪ ಗೊಂಡು ಹರಿಶ್ಚಂದ್ರ ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟ್ನಿಂದ ಸುಧಾರ ತಲೆಗೆ ಹೊಡೆದು ಗಾಯಗೊಳಿಸಿ, ಕೈಗೆ ಕಾಲಿಗೆ ಬ್ಯಾಟಿನಿಂದ ಹೊಡೆದು ಅವಾಚ್ಯವಾಗಿ ನಿಂದಸಿ, ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.





