ಲೈಂಗಿಕ ಕಿರುಕುಳದ ಆರೋಪ: ಎಐಆರ್ ಅಧಿಕಾರಿಗೆ ಹಿಂಬಡ್ತಿ
(ಮೀ ಟೂ ಅಭಿಯಾನ)
ಹೊಸದಿಲ್ಲಿ,ಡಿ.8: ಒಂಭತ್ತು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳಗಳನ್ನು ನೀಡಿದ್ದ ಆರೋಪಕ್ಕೊಳಗಾಗಿದ್ದ ಮಧ್ಯಪ್ರದೇಶದ ಶಾದೋಲ್ ಆಕಾಶವಾಣಿ (ಎಐಆರ್) ಕೇಂದ್ರದ ಸಹಾಯಕ ನಿರ್ದೇಶಕರನ್ನು ಹಿಂಬಡ್ತಿಗೊಳಿಸಲಾಗಿದೆ ಮತ್ತು ವರ್ಗಾವಣೆಗೊಳಿಸಲಾಗಿದೆ ಎಂದು ಪ್ರಸಾರ ಭಾರತಿಯು ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲು)ಕ್ಕೆ ಸಲ್ಲಿಸಿರುವ ಕ್ರಮಾನುಷ್ಠಾನ ವರದಿಯಲ್ಲಿ ತಿಳಿಸಿದೆ.
ಪ್ರಸಾರ ಭಾರತಿಯ ಕ್ರಮಾನುಷ್ಠಾನ ವರದಿಯು ತನ್ನ ಕೈಸೇರಿದೆ. ಆಂತರಿಕ ದೂರುಗಳ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿರುವ ಪ್ರಸಾರ ಭಾರತಿಯು ಆರೋಪಿ ಅಧಿಕಾರಿಯನ್ನು ಒಂದು ವರ್ಷ ಅವಧಿಗೆ ಎರಡು ಹಂತ ಕೆಳಗಿನ ವೇತನಶ್ರೇಣಿಗೆ ಹಿಂಬಡ್ತಿಗೊಳಿಸಿದೆ ಮತ್ತು ಈ ಅವಧಿಯಲ್ಲಿ ಅವರಿಗೆ ವೇತನ ಏರಿಕೆಯನ್ನು ನಿರ್ಬಂಧಿಸಿದೆ. ಆಡಳಿತಾತ್ಮಕ ಕ್ರಮವಾಗಿ ಸದ್ರಿ ಅಧಿಕಾರಿಯ ವರ್ಗಾವಣೆಯನ್ನೂ ಮಾಡಲಾಗಿದೆ ಎಂದು ಎನ್‌ಸಿಡಬ್ಲು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಆಂತರಿಕ ದೂರುಗಳ ಸಮಿತಿಯು ನಡೆಸಿದ ವಿಚಾರಣೆಯಲ್ಲಿ ಅಧಿಕಾರಿಯ ವಿರುದ್ಧದ ಆರೋಪಗಳು ರುಜುವಾತಾಗಿವೆ ಎಂದು ಕ್ರಮಾನುಷ್ಠಾನ ವರದಿಯು ತಿಳಿಸಿದೆ.
ಲೈಂಗಿಕ ಕಿರುಕುಳ ದೂರುಗಳನ್ನು ಪರಿಶೀಲಿಸುವಂತೆ ಆಯೋಗವು ಕಳೆದ ತಿಂಗಳು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿತ್ತು. ಈ ಬಗ್ಗೆ ತನಿಖೆಯನ್ನು ನಡೆಸುವಂತೆ ಮತ್ತು 15 ದಿನಗಳಲ್ಲಿ ಕ್ರಮಾನುಷ್ಠಾನ ವರದಿಯನ್ನು ಸಲ್ಲಿಸುವಂತೆ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಪ್ರಸಾರ ಭಾರತಿಯ ಸಿಇಒ ಶಶಿ ವಿ.ವೆಂಪತಿ ಅವರಿಗೆ ತಿಳಿಸಿದ್ದರು.
ಅಖಿಲ ಭಾರತ ರೇಡಿಯೊ ಉದ್ಘೋಷಕಿಯರು ಮತ್ತು ನಿರೂಪಕಿಯರ ಸಂಘದ ದೂರಿನ ಮೇರೆಗೆ ಆಯೋಗವು ಈ ಕ್ರಮವನ್ನು ಕೈಗೊಂಡ್ತಿು. ದೇಶಾದ್ಯಂತ ಹಲವಾರು ಆಕಾಶವಾಣಿ ಕೇಂದ್ರಗಳಲ್ಲಿ ಉದ್ಘೋಷಕಿಯರು ಮತ್ತು ನಿರೂಪಕಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.