ಡಿ.12-13ರಂದು ಸಿಎ ವಿದ್ಯಾರ್ಥಿ ಸಮ್ಮೇಳನ ‘ವಿದ್ವತ್’

ಮಂಗಳೂರು, ಡಿ.8: ದಕ್ಷಿಣ ಭಾರತ ಸಿಎ ವಿದ್ಯಾರ್ಥಿಗಳ ಸಂಘ (ಸಿಕಾಸ)ದ ಮಂಗಳೂರು ಶಾಖೆ ವತಿಯಿಂದ ಎರಡು ದಿನಗಳ ಸಿಎ ವಿದ್ಯಾರ್ಥಿ ಸಮ್ಮೇಳನ ‘ವಿದ್ವತ್’ ಡಿ.12, 13ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಶಿವಾನಂದ ಪೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು ಡಿ.12ರಂದು ಬೆಳಗ್ಗೆ 9ಕ್ಕೆ ನಡೆಯಲಿದ್ದು, ಐಸಿಎಐ ಮಾಜಿ ಅಧ್ಯಕ್ಷ ಜಿ.ರಾಮಸ್ವಾಮಿ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭ ಡಿ.13ರಂದು ಸಂಜೆ 4:15ಕ್ಕೆ ನಡೆಯಲಿದೆ. ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮ್ಮೇಳನಕ್ಕೆ ದ.ಕ., ಉಡುಪಿ, ಶಿವಮೊಗ್ಗ ಜಿಲ್ಲೆಗಳ ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಆರು ತಾಂತ್ರಿಕ ಗೋಷ್ಠಿಗಳು: ವಿದ್ವತ್ ಸಮ್ಮೇಳನದಲ್ಲಿ ಆರು ತಾಂತ್ರಿಕ ಗೋಷ್ಠಿಗಳಿದ್ದು, ಸಿಎ ಸಮಕಾಲೀನ ವಿಷಯಗಳಾದ ಜಿಎಸ್‌ಟಿ, ಇಂಡ್ ಎಎಸ್, ಆದಾಯ ತೆರಿಗೆ, ಆಮದು ಮತ್ತು ರ್ತು, ಕೃತಕ ಬುದ್ಧಿಮತ್ತೆ, ಬೇನಾಮಿ ವ್ಯವಹಾರಗಳು ಇತ್ಯಾದಿಗಳ ಕುರಿತು ಪ್ರಬಂಧ ಮಂಡನೆಯಾಗಲಿವೆ. ಜತೆಗೆ ಐದು ವಿಶೇಷ ಗೋಷ್ಠಿಗಳು ನಡೆಯಲಿದ್ದು, ಬೆಂಗಳೂರಿನ ಸಿಎ ಮಧುಕರ ಹಿರೇಗಂಗೆ ಅವರು ಸಿಎ ಪರೀಕ್ಷೆ ಎದುರಿಸುವ ಬಗೆ, ನಗರದ ಖ್ಯಾತ ವೈದ್ಯ ಡಾ.ಜಿ.ಜಿ. ಲಕ್ಷ ್ಮಣ ಪ್ರಭು ಅವರು ಜೀವನದ ಸಣ್ಣ ಸಂಗತಿಗಳು ಹಾಗೂ ವೃತ್ತಿಯ ಕುರಿತು, ಬೆಂಗಳೂರಿನ ಆನಂದ್ ಪ್ರಕಾಶ್ ಜಂಗಿದ್ ಅವರು ಸಿಎ ವೃತ್ತಿಯಲ್ಲಿ ತಂತ್ರಜ್ಞಾನದ ಬಳಕೆ, ಸೆಂಥಿಲ್‌ನಾಥನ್ ಉದ್ದಿಮೆಗಳ ಭವಿಷ್ಯವನ್ನು ರೂಪಿಸುವಲ್ಲಿ ಸಿಎಗಳ ಪಾತ್ರ ಮತ್ತು ಮುಂಬೈನ ಚಂದ್ರಕಾಂತ್ ವಾಜೇ ವೃತ್ತಿಯಲ್ಲಿ ನೈತಿಕತೆ ಪಾಲಿಸುವ ಕುರಿತು ಉಪನ್ಯಾಸ ನೀಡಲಿದೆ ಎಂದರು.
‘ಸಿಕಾಸ’ವು ಅಖಿಲ ಭಾರತ ಲೆಕ್ಕ ಪರಿಶೋಧಕ ಸಂಸ್ಥೆಯ ದ.ಕ. ಭಾರತ ಪ್ರಾಂತೀಯ ಮಂಡಳಿಯ ವಿದ್ಯಾರ್ಥಿ ಘಟಕವಾಗಿದೆ. ಮಂಗಳೂರು ಶಾಖೆಯಲ್ಲಿ 2 ಸಾವಿರಕ್ಕೂ ಹೆಚ್ಚು ಸಿಎ ವಿದ್ಯಾರ್ಥಿಗಳು ಹಾಗೂ 600ಕ್ಕೂ ಅಧಿಕ ಸಿಎಗಳು ಇದರ ಅಧೀನದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶಿವಾನಂದ ಪೈ ತಿಳಿಸಿದರು.
ಅಖಿಲ ಭಾರತ ಲೆಕ್ಕ ಪರಿಶೋಧಕ ಸಂಸ್ಥೆಯಿಂದ 9ನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗಾಗಿ ‘ಟ್ಯಾಲೆಂಟ್ ಸರ್ಚ್ ಟೆಸ್ಟ್’ ಆಯೋಜಿಸಲಾ ಗಿದ್ದು, ಜ.6ರಂದು ಆನ್‌ಲೈನ್ ಪರೀಕ್ಷೆ, ಜ.20ರಂದು ಲಿಖಿತ ಪರೀಕ್ಷೆ ನಡೆಯಲಿದೆ. 100 ರೂ. ಶುಲ್ಕದೊಂದಿಗೆ ಡಿ.31ರೊಳಗೆ ನೋಂದಣಿ ಮಾಡಬೇಕು. ಬಹುಮಾನ ವಿಜೇತರಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಕಾಸ ಮಂಗಳೂರು ಶಾಖೆ ಉಪಾಧ್ಯಕ್ಷ ಅನಂತ ಪದ್ಮನಾಭ, ಕಾರ್ಯದರ್ಶಿ ರವಿರಾಜ ಬೈಕಂಪಾಡಿ, ಸಿಕಾಸ ಮುಖ್ಯಸ್ಥ ಅಬ್ದುರ್ ರೆಹಮಾನ್ ಮುಸ್ಬ, ಉಪಾಧ್ಯಕ್ಷೆ ಅನೀಶಾ ಲೋಬೊ, ಕಾರ್ಯದರ್ಶಿ ರಜತ್ ಪ್ರಭು ಇದ್ದರು.