ಯುನಿವೆಫ್: ಪ್ರವಾದಿ ಸಂದೇಶ ಪ್ರಚಾರ ಅಭಿಯಾನ ಉದ್ಘಾಟನೆ
ಮಂಗಳೂರು, ಡಿ. 8: ನವೆಂಬರ್ 30 ರಿಂದ 2019 ರ ಫೆ. 1ರ ತನಕ “ವರ್ತಮಾನ ಮತ್ತು ಭವಿಷ್ಯ-ಪ್ರವಾದಿ ಮುಹಮ್ಮದ್(ಸ)ರ ದೃಷ್ಟಿಯಲ್ಲಿ” ಎಂಬ ಕೇಂದ್ರೀಯ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಆಯೋಜಿಸಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಅಭಿಯಾನದ ಉದ್ಘಾಟನಾ ಸಮಾರಂಭವು ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‍ನಲ್ಲಿ ಜರಗಿತು.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಿ “ಸಾಮಾಜಿಕ ನ್ಯಾಯ ಮತ್ತು ಶೋಷಿತರ ಸಹಾಯ ಇವುಗಳು ಕೇವಲ ಭಾಷಣಗಳಿಗೆ ಸೀಮಿತವಾಗಿರದೆ ಪ್ರಾಯೋಗಿಕವಾಗಿ ಅನುಷ್ಟಾನಗೊಳ್ಳುತ್ತಿದ್ದರೆ ಸಮುದಾಯ ಈ ಸ್ಥಿತಿಗೆ ತಲುಪುತ್ತಿರಲಿಲ್ಲ. ಆರಾಧನೆಗಳಿಗೆ ನೀಡುವ ಮಹತ್ವವನ್ನು ಸಮಾಜ ಸೇವೆ ಮತ್ತು ಸಮುದಾಯದ ಸಬಲೀಕರಣಕ್ಕೆ ನೀಡಿದಾಗ ಮಾತ್ರ ಸಮುದಾಯದ ಉದ್ಧಾರ ಸಾಧ್ಯ” ಎಂದು ಹೇಳಿದರು.
ಅಭಿಯಾನದ ಸಂಚಾಲಕ ಅಬ್ದುಲ್ಲಾ ಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಹಿಲ್ ರಝ್ಝಾಕ್ ಸಯೀದ್ ಕಿರ್ ಅತ್ ಪಠಿಸಿದರು. ಶಾಖಾಧ್ಯಕ್ಷ ನೌಫಲ್ ಹಸನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಖಾ ಕಾರ್ಯದರ್ಶಿ ಅಡ್ವೊಕೇಟ್ ಸಿರಾಜುದ್ದೀನ್ ವಂದಿಸಿದರು.





