ಬುಲಂದ್‌ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಯೋಧನ ಬಂಧನ

ಲಕ್ನೊ, ಡಿ.8: ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂಸಾಚಾರದ ಸಂದರ್ಭ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಶಂಕಿಸಲಾದ ಸೇನೆಯ ಯೋಧ ಜೀತು ಫೌಜಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಗೋಹತ್ಯೆ ನಡೆದಿದೆ ಎಂಬ ಗಾಳಿಸುದ್ದಿಯ ಹಿನ್ನೆಲೆಯಲ್ಲಿ ಸೋಮವಾರ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂಸಾಚಾರ ನಡೆದ ಸಂದರ್ಭ ಗುಂಡೇಟು ತಗುಲಿ ಇನ್ಸ್‌ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಸಾವನ್ನಪ್ಪಿದ್ದರು. ಶ್ರೀನಗರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಯೋಧ , ಸ್ಥಳೀಯ ನಿವಾಸಿ ಜೀತು ಫೌಜಿ ಗುಂಡು ಹಾರಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಬುಲಂದ್‌ಶಹರ್‌ನಲ್ಲಿ ನಡೆದ ಗುಂಪು ಗಲಭೆಯ ಹಲವು ವೀಡಿಯೊ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಜೀತು ಫೌಜಿ ಬಳಿಕ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರ ಒಂದು ತಂಡ ಯೋಧನ ಪತ್ತೆಗಾಗಿ ಶ್ರೀನಗರಕ್ಕೆ ತೆರಳಿತ್ತು.
ಶನಿವಾರ ಈತನನ್ನು ಜಮ್ಮು ಕಾಶ್ಮೀರದ ಸೊಪೋರ್ ನಗರದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಸುಬೋಧ್ ಕುಮಾರ್ ಸಿಂಗ್‌ಗೆ ಗುಂಡು ಹಾರಿಸಿದ್ದು ಜೀತು ಫೌಜಿ ಎಂಬುದು ಇನ್ನೂ ದೃಢಪಟ್ಟಿಲ್ಲ.ವಿಚಾರಣೆಯ ಬಳಿಕ ಹೆಚ್ಚಿನ ಮಾಹಿತಿ ದೊರಕಲಿದೆ ಎಂದು ತನಿಖಾ ತಂಡದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





