ಡಿ.10ಕ್ಕೆ ಬೆಳಗಾವಿಯಲ್ಲಿ ರೈತ ಪ್ರತಿಭಟನೆ: ಸದನ ಸಮಿತಿ ವರದಿ ಮಂಡನೆಗೆ ಒತ್ತಾಯ

ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು, ಡಿ.8: ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ನೈಸ್ ಕಂಪೆನಿಯ ಭ್ರಷ್ಟಾಚಾರದ ವಿರುದ್ಧ ಡಿ.10ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಬೇಕು ಹಾಗೂ ನೈಸ್ ಕಂಪೆನಿಯ ಅಕ್ರಮದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರಿಗೆ ಮಾಹಿತಿಯಿದ್ದು, ಅವರು ಹಸಿರು ಸೇನೆ ಮತ್ತು ರಾಜ್ಯ ರೈತ ಸಂಘದ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ನೈಸ್ ಕಂಪೆನಿಯ ಅಕ್ರಮ-ಸಕ್ರಮದ ಸಂಪೂರ್ಣ ಮಾಹಿತಿಯಾದ, ಸದನ ಸಮಿತಿ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಮುಲಾಜಿಲ್ಲದೆ ಈ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಟೌನ್ಶಿಪ್ಗೆ 13,194 ಎಕರೆ ಭೂಮಿ ಬೇಕಾಗಿದ್ದು ಸರಕಾರವು 18,313 ಎಕರೆಯನ್ನು ನೀಡಿದೆ. ಆದರೆ, ರೈತರ ಭೂಮಿಯು ಸೇರಿದಂತೆ 20,193 ಎಕರೆ ಭೂಮಿಯನ್ನು ನೈಸ್ ಕಂಪನಿ ಮಂಡ್ಯ, ಮೈಸೂರು, ರಾಮನಗರದ ಬಿಡದಿ ಬಳಿ ರೈತರಿಂದ ಅಕ್ರಮವಾಗಿ ಕಬಳಿಸಿದೆ ಎಂದು ಆರೋಪಿಸಿದರು.
ನೈಸ್ ಭ್ರಷ್ಟಾಚಾರ ಸಂಬಂಧ ಸುಪ್ರೀಂಕೋರ್ಟ್ನಲ್ಲಿ 2018 ಜುಲೈ 26 ರಂದು ನೈಸ್ ಕಂಪನಿಯ ಅಕ್ರಮ ಭೂಕಬಳಿಕೆ ವಿರುದ್ಧ ತನಿಖೆ ನಡೆಸುವಂತೆ ಸಲ್ಲಿಸಲಾದ, ವಿಶೇಷ ಮೇಲ್ವನವಿಯ ವಿಚಾರಣೆ ವೇಳೆ ನೈಸ್ ಕಂಪನಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರಿಗೆ, ಅರ್ಜಿದಾರರ ಮೇಲ್ಮನವಿಯ ಗ್ರೌಂಡ್- ಎ ನಲ್ಲಿ ಎತ್ತಲಾದ 12 ಆರೋಪಗಳಿಗೆ ಸ್ಪಷ್ಟವಾದ ಉತ್ತರವನ್ನು ನೀಡುವಂತೆ ಮತ್ತು ಅರ್ಜಿದಾರರ ಆರೋಪಗಳು ಈ ಮುಂಚೆ ಯಾವ ಪ್ರಕರಣದಲ್ಲಿ ಇತ್ಯರ್ಥವಾಗಿದೆ ಎಂಬ ಪಟ್ಟಿಯನ್ನು ಸಲ್ಲಿಸುವಂತೆ ಆದೇಶಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಈ ಮೇಲ್ವನವಿಯಲ್ಲಿ ಸರಕಾರದ ಪರ ವಕೀಲರು 2018, ಜನವರಿ 24 ರಂದು ಆಕ್ಷೇಪಣೆ ಸಲ್ಲಿಸಿದ್ದರೂ, ಆಗಸ್ಟ್ 30, 2018 ರಂದು ಮತ್ತೊಮ್ಮೆ ನ್ಯಾಯಾಲಯದ ಯಾವುದೇ ಆದೇಶವಿಲ್ಲದೆ ಸ್ವಯಂ ಪ್ರೇರಿತರಾಗಿ, ದುರುದ್ದೇಶದಿಂದ ಕೂಡಿದ ಹೆಚ್ಚುವರಿ ಆಕ್ಷೇಪಣಾ ಪ್ರಮಾಣ ಪತ್ರವನ್ನು ಕಂಪೆನಿಗೆ ಅನುಕೂಲವಾಗುವಂತೆ ಸಲ್ಲಿಸಿರುತ್ತಾರೆ ಎಂದು ಆರೋಪ ಮಾಡಿದರು.







