26/11 ದಾಳಿಯ ಶೀಘ್ರ ಇತ್ಯರ್ಥ ಪಾಕಿಸ್ತಾನಕ್ಕೆ ಒಳ್ಳೆಯದು: ಇಮ್ರಾನ್

ಇಸ್ಲಾಮಾಬಾದ್, ಡಿ. 8: “2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಸ್ಥಿತಿಗತಿಯನ್ನು ವಿಚಾರಿಸುವಂತೆ ನನ್ನ ಸರಕಾರಕ್ಕೆ ಸೂಚಿಸಿದ್ದೇನೆ” ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಈ ಪ್ರಕರಣವನ್ನು ಇತ್ಯರ್ಥಪಡಿಸುವುದು ಪಾಕಿಸ್ತಾನದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಲಷ್ಕರೆ ತಯ್ಯಬ ಸಂಘಟನೆಯ ಭಯೋತ್ಪಾದಕರು ನಡೆಸಿದ ಮಾರಣ ಹೋಮದ 10ನೇ ವಾರ್ಷಿಕ ದಿನದ ಸಂದರ್ಭದಲ್ಲಿ, ಅದರ ಸೂತ್ರಧಾರಿಗಳು ಮತ್ತು ಅನುಷ್ಠಾನದಲ್ಲಿ ನೆರವು ನೀಡಿದವರನ್ನು ಶಿಕ್ಷಿಸುವಂತೆ ಭಾರತ ಪಾಕಿಸ್ತಾನದ ಮೇಲೆ ಪದೇ ಪದೇ ಒತ್ತಡ ಹೇರಿರುವುದನ್ನು ಸ್ಮರಿಸಬಹುದಾಗಿದೆ.
ಪಾತಕಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವಲ್ಲಿ ಪಾಕಿಸ್ತಾನ ಯಾವುದೇ ಪ್ರಾಮಾಣಿಕತೆಯನ್ನು ತೋರಿಸಿಲ್ಲ ಎಂಬುದಾಗಿ ಭಾರತ ಆರೋಪಿಸಿದೆ.
‘‘ಮುಂಬೈ ದಾಳಿಯ ಬಗ್ಗೆ ಏನಾದರೂ ಮಾಡಬೇಕು ಎಂದು ನಾವೂ ಬಯಸಿದ್ದೇವೆ. ಪ್ರಕರಣದ ಸ್ಥಿತಿಗತಿಯನ್ನು ವಿಚಾರಿಸುವಂತೆ ನನ್ನ ಸರಕಾರಕ್ಕೆ ನಾನು ಸೂಚಿಸಿದ್ದೇನೆ. ಅದೊಂದು ಭಯೋತ್ಪಾದಕ ಕೃತ್ಯ. ಹಾಗಾಗಿ, ಅದನ್ನು ಇತ್ಯರ್ಥಪಡಿಸುವುದು ನಮಗೇ ಒಳ್ಳೆಯದು’’ ಎಂದು ‘ವಾಶಿಂಗ್ಟನ್ ಪೋಸ್ಟ್’ಗೆ ನೀಡಿದ ಸಂದರ್ಶನವೊಂದರಲ್ಲಿ ಇಮ್ರಾನ್ ಖಾನ್ ಹೇಳಿದರು.
7 ಆರೋಪಿಗಳ ವಿಚಾರಣೆ ಸ್ಥಗಿತ
ಮುಂಬೈ ದಾಳಿಗೆ ಸಂಬಂಧಿಸಿ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದರಲ್ಲಿ ನಡೆಯುತ್ತಿದ್ದ ಲಷ್ಕರೆ ತಯ್ಯಬದ ಆಪರೇಶನ್ಸ್ ಕಮಾಂಡರ್ ಝಕಿಉರ್ ರೆಹಮಾನ್ ಲಾಖ್ವಿ ಸೇರಿದಂತೆ ಏಳು ಆರೋಪಿಗಳ ವಿಚಾರಣೆ ಈಗ ಸ್ಥಗಿತಗೊಂಡಿದೆ. ವಿಚಾರಣೆಯನ್ನು ಮುಂದುವರಿಸಲು ಭಾರತದಿಂದ ಹೆಚ್ಚಿನ ಪುರಾವೆಯ ಅಗತ್ಯವಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಆದರೆ, ಶಂಕಿತರನ್ನು ಶಿಕ್ಷಿಸಲು ಅಗತ್ಯವಾದ ಸಾಕಷ್ಟು ಪುರಾವೆಗಳನ್ನು ನೀಡಲಾಗಿದೆ ಎಂದು ಭಾರತ ಹೇಳುತ್ತಿದೆ.







