ಅಮೆರಿಕದ ಆರ್ಥಿಕ ದಿಗ್ಬಂಧನ ‘ಆರ್ಥಿಕ ಭಯೋತ್ಪಾದನೆ’: ರೂಹಾನಿ

ಟೆಹರಾನ್, ಡಿ. 8: ಇರಾನ್ ಮೇಲೆ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನ ‘ಆರ್ಥಿಕ ಭಯೋತ್ಪಾದನೆ’ಯಾಗಿದೆ ಎಂದು ಆ ದೇಶದ ಅಧ್ಯಕ್ಷ ಹಸನ್ ರೂಹಾನಿ ಶನಿವಾರ ಹೇಳಿದ್ದಾರೆ.
2015ರಲ್ಲಿ ಇರಾನ್ ಪ್ರಬಲ ದೇಶಗಳೊಂದಿಗೆ ಸಹಿ ಹಾಕಿರುವ ಪರಮಾಣು ಒಪ್ಪಂದದಿಂದ ಅಮೆರಿಕ ಈ ವರ್ಷದ ಮೇ ತಿಂಗಳಲ್ಲಿ ಹೊರಗೆ ಬಂದಿರುವುದನ್ನು ಸ್ಮರಿಸಬಹುದಾಗಿದೆ. ಬಳಿಕ, ಇರಾನ್ ವಿರುದ್ಧ ತೈಲ ದಿಗ್ಬಂಧನ ಹಾಗೂ ಇತರ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ.
‘‘ಗೌರವಾನ್ವಿತ ಇರಾನ್ ದೇಶದ ವಿರುದ್ಧ ಅಮೆರಿಕ ವಿಧಿಸಿರುವ ಅನ್ಯಾಯದ ಹಾಗೂ ಕಾನೂನುಬಾಹಿರ ದಿಗ್ಬಂಧನಗಳು ಭಯೋತ್ಪಾದನೆಯ ರೀತಿಯಲ್ಲಿ ನಮ್ಮ ದೇಶವನ್ನು ಬಾಧಿಸಿವೆ’’ ಎಂದು ಟೆಲಿವಿಶನ್‌ನಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರೂಹಾನಿ ಹೇಳಿದರು.
ಅವರು ಇಲ್ಲಿ ನಡೆದ ‘ಭಯೋತ್ಪಾದನೆ ಮತ್ತು ಪ್ರಾದೇಶಿಕ ಸಹಕಾರ’ ಎಂಬ ವಿಷಯದ ಕುರಿತ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅಫ್ಘಾನಿಸ್ತಾನ, ಚೀನಾ, ಪಾಕಿಸ್ತಾನ, ರಶ್ಯ ಮತ್ತು ಟರ್ಕಿ ದೇಶಗಳ ಸಂಸತ್ ಸ್ಪೀಕರ್‌ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
‘‘ನಾವು ಪೂರ್ಣ ಪ್ರಮಾಣದ ಆಕ್ರಮಣವನ್ನು ಎದುರಿಸುತ್ತಿದ್ದೇವೆ. ಇದು ನಮ್ಮ ಸ್ವಾತಂತ್ರ್ಯ ಮತ್ತು ಅಸ್ಮಿತೆಗೆ ಬೆದರಿಕೆಯಾಗಿದೆ ಮಾತ್ರವಲ್ಲ, ನಮ್ಮ ದೀರ್ಘಕಾಲೀನ ಸಂಬಂಧಗಳನ್ನು ಮುರಿಯುವುದನ್ನೂ ಗುರಿಯಾಗಿಸಿದೆ’’ ಎಂದು ರೂಹಾನಿ ಅಭಿಪ್ರಾಯಪಟ್ಟರು.







