ಮಣಿಪಾಲದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

ಉಡುಪಿ, ಡಿ. 8: ಯುರೋಪಿಯನ್ ಒಕ್ಕೂಟ (ಇಯು) ಭಾರತ ದೇಶದಲ್ಲೇ ಮೊದಲನೇಯದಾಗಿ ಪ್ರಾರಂಭಿಸಿದ ಜೀನ್ ಮೊನ್ನೆಟ್ ಸೆಂಟರ್ ಆಫ್ ಎಕ್ಸಲೆನ್ಸ್‌ನ್ನು ಯುರೋಪಿಯನ್ ಯೂನಿಯನ್‌ನ ಭಾರತೀಯ ರಾಯಭಾರಿ ಥಾಮಸ್ ಕೊಝಿವಸ್ಕಿ ಅವರು ಇಂದು ಮಾಹೆಯ ಯುರೋಪಿಯನ್ ಸ್ಟಡೀಸ್ ವಿಭಾಗದಲ್ಲಿ ಉದ್ಘಾಟಿಸಿದರು.
ಇದೊಂದು ಭಾವನಾತ್ಮಕ ಕ್ಷಣ. ಜೀನ್ ಮೊನ್ನೆಟ್ ಸೆಂಟರ್ ಎಂಬುದು ವಿಶೇಷವಾದ ಹಾಗೂ ಪ್ರತಿಷ್ಠಿತವಾದ ಪ್ರಶಸ್ತಿ. ಇದನ್ನು ಪಡೆಯಲು ಮಾಹೆಯ ಯುರೋಪಿಯನ್ ಸ್ಟಡೀಸ್ ವಿಶೇಷವಾದ ಸಾಧನೆಯನ್ನೇ ಮಾಡಿರಬೇಕು ಎಂದು ಅವರು ಹೇಳಿದರು.
ಮಾಹೆ ವಿವಿಯ ನಾಯಕತ್ವ, ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಭಿನಂದಿಸಿದ, ಉನ್ನತ ಶಿಕ್ಷಣದ ಪಸರಿಸುವಿಕೆಯಲ್ಲಿ ಹಾಗೂ ಅಂತಾರಾಷ್ಟ್ರೀಯ ಸಂಬಂಧ ಕುರಿತು ಸಂಶೋಧನೆಯಲ್ಲಿ ಮಣಿಪಾಲ ಅತೀ ದೊಡ್ಡ ಹೆಸರನ್ನು ಸಂಪಾದಿಸಿದೆ. ಕೇಂದ್ರದೊಂದಿಗೆ ಒಂದು ಲಕ್ಷ ಯುರೋ ಅನುದಾನವು ಮಣಿಪಾಲಕ್ಕೆ ದೊರಕಿದೆ ಎಂದರು.
ಭಾರತ-ಇಯುನ ಅಂತರವಿಭಾಗೀಯ ಅಧ್ಯಯನ ಸಂಸ್ಕೃತಿ, ಸಾಹಿತ್ಯ, ಶಿಕ್ಷಣ ಮತ್ತು ಸಮಾಜಕ್ಕೆ ಸಂಬಂಧಿಸಿದಂತೆ ನಡೆಯಲಿದೆ. ಎರಾಸ್‌ಮಸ್ ಹಾಗೂ ಜೀನ್ ಮೊನ್ನೆಟ್ ಸ್ಕಾಲರ್‌ಶಿಪ್ ಅಡಿಯಲ್ಲಿ ಮಾಹೆಗೆ ಅನುದಾನ ದೊರೆತಿರು ವುದು ಇದು ಐದನೇ ಸಲ ಎಂದು ಇಯು ರಾಯಭಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್. ಎಸ್.ಬಲ್ಲಾಳ್, ಮಾಹೆಯ ಶಿಕ್ಷಣದ ಗುಣಮಟ್ಟ ಹಾಗೂ ಸಂಶೋದನಾ ಸಾಮರ್ಥ್ಯಕ್ಕೆ ಈ ಪ್ರತಿಷ್ಠಿತ ಗ್ರಾಂಟ್ ದೊರೆತಿರುವುದೇ ಸಾಕ್ಷಿಯಾಗಿದೆ ಎಂದರು. ಮಾಹೆಯ ಯುರೋಪಿಯನ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ನೀತಾ ಇನಾಂದಾರ್ ಉಪಸ್ಥಿತರಿದ್ದರು.