ಉಡುಪಿ: 16ರಿಂದ ‘ಸಾವಯವ ಸಂತೆ’ ಪುನರಾರಂಭ
ಉಡುಪಿ, ಡಿ.8: ಜಿಲ್ಲಾ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲಾ ಪ್ರಾಂತೀಯ ಸಾವಯವ ಕೃಷಿಕರ ಒಕ್ಕೂಟ ಹಾಗೂ ಗೋಮಾತಾ ಆರ್ಗ್ಯಾನಿಕ್ಸ್ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಸಾವಯವ ಸಂತೆ’ ಡಿ.16ರಿಂದ ಪುನರಾರಂಭಗೊಳ್ಳ ಲಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಸಾಲಿನಂತೆ ಈ ಸಾವಯವ ಸಂತೆ ಪ್ರತಿ ರವಿವಾರ ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯಲಿದೆ. ಇಲ್ಲಿ ಕೇವಲ ಅಧಿಕೃತ ಸಾವಯವ ಕೃಷಿ ಉತ್ಪನ್ನಗಳು ಮಾತ್ರ ಮಾರಾಟಕ್ಕೆ ಇರಲಿದೆ ಎಂದು ವಿವರಿಸಿದರು.
ಕಳೆದ ವರ್ಷ ಅ.15ಕ್ಕೆ ಸಾವಯವ ಸಂತೆ ಪ್ರಾರಂಭಗೊಂಡಿತ್ತು. ಆದರೆ ಈ ಬಾರಿ ಮಳೆಯ ವೈಫರಿತ್ಯದಿಂದ ಕೃಷಿಗೆ ಹಾನಿಯಾಗಿದ್ದು, ಇದರಿಂದ ಎರಡು ತಿಂಗಳು ವಿಳಂಬವಾಗಿ ಸಾವಯವ ಸಂತೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ದೇವದಾಸ ಹೆಬ್ಬಾರ್ ವಿವರಿಸಿದರು.
ಅಂಕಿಅಂಶದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ವಾರ್ಷಿಕವಾಗಿ ಮಾರಾಟ ವಾಗುವ ರಸಗೊಬ್ಬರ ಕೇವಲ 30,000 ಟನ್ ಮಾತ್ರ. ಇದರರ್ಥ ಇಲ್ಲಿ ಹೆಚ್ಚಿನವರು ಸಾವಯವ ಗೊಬ್ಬರವನ್ನೇ ಕೃಷಿಗೆ ಬಳಸುತಿದ್ದಾರೆ ಎಂಬುದಾಗಿದೆ ಎಂದರು.
ಅಧಿಕೃತ ಮಾಹಿತಿಯಂತೆ ಜಿಲ್ಲೆಯಲ್ಲಿ 436 ಸಾವಯವ ಕೃಷಿಕರಿದ್ದು, ಇವರೆಲ್ಲರೂ ಸಾವಯವ ದೃಢೀಕರಣ ಪ್ರಮಾಣ ಸಂಸ್ಥೆಯಿಂದ ಅಧಿಕೃತ ಮಾನ್ಯತೆಯನ್ನು ಪಡೆದಿದ್ದಾರೆ. ಇವರು ಒಟ್ಟು 497.86 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಉತ್ಪನ್ನಗಳನ್ನು ಬೆಳೆಯುತಿದ್ದಾರೆ ಎಂದು ಕೆಂಪೇಗೌಡ ತಿಳಿಸಿದರು. ಜಿಲ್ಲೆಯಲ್ಲಿ ಇನ್ನೂ 200ಕ್ಕೂ ಅಧಿಕ ರೈತರು ಸಾವಯವ ಸಂಸ್ಥೆಯಿಂದ ಮಾನ್ಯತೆ ಪಡೆಯುವ ವಿವಿಧ ಹಂತಗಳಲ್ಲಿದ್ದು, ಇವರು 187 ಹೆಕ್ಟೇರ್‌ನಲ್ಲಿ ಸಾವಯವ ಕೃಷಿ ಬೆಳೆಯಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಇನ್ನೂ 200ಕ್ಕೂ ಅಧಿಕ ರೈತರು ಸಾವಯವ ಸಂಸ್ಥೆಯಿಂದ ಮಾನ್ಯತೆ ಪಡೆಯುವ ಉಡುಪಿ ಸಾವಯವ ಸಂತೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಧಿಕೃತ ಸಾವಯವ ಕೃಷಿಕರು ಬೆಳೆದ ವಿವಿಧ ಉತ್ಪನ್ನಗಳು ಮಾತ್ರ ಮಾರಾಟಗೊಳ್ಳಲಿವೆ. ಇವುಗಳಲ್ಲಿ ಸಾವಯವ ತರಕಾರಿಗಳು, ಹಣ್ಣುಗಳು, ಸೊಪ್ಪುಗಳು, ಸಿರಿಧಾನ್ಯಗಳು ಸೇರಿವೆ.
ಅಲ್ಲದೇ ರಜಾಮುಡಿ,ನವರಅಕ್ಕಿ, ಕೆಂಪಕ್ಕಿ, ಬಿದಿರಕ್ಕಿ, ಸೋನಾ ಮಸೂರಿ, ಕುಚ್ಚಲಕ್ಕಿ, ದೋಸೆ ಅಕ್ಕಿ, ಅಕ್ಕಿ ರವಾ, ಅಕ್ಕಿ ಹಿಟ್ಟು, ಕೆಂಪು ದಪ್ಪ ಅವಲಕ್ಕಿ, ತೆಳು ಅವಲಕ್ಕಿ, ಬೇಳೆಕಾಳುಗಳು ಇಲ್ಲಿ ಸಿಗಲಿವೆ. ಇದರೊಂದಿಗೆ ಸಾವಯವ ಬೆಲ್ಲ, ಬೆಲ್ಲದ ಪೌಡರ್, ಜೇನುತುಪ್ಪ, ದೇಶೀ ದನದ ತುಪ್ಪ ಹಾಗೂ ಇತರ ಉತ್ಪನ್ನಗಳು ದೊರಕುತ್ತವೆ ಎಂದು ದೇವದಾಸ ಹೆಬ್ಬಾರ್ ತಿಳಿಸಿದರು.
ಸಾವಯವ ಸಂತೆ ಪ್ರತಿ ರವಿವಾರ ಬೆಳಗ್ಗೆ 7ರಿಂದ 11ಗಂಟೆಯವರೆಗೆ ತೆರೆದಿರುತ್ತದೆ ಎಂದೂ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಿಮ್ಮಣ್ಣ ಹೆಗಡೆ, ಚಂದ್ರಶೇಖರ್, ಸತೀಶ್ ಜಿ.ಪಿ. ಉಪಸ್ಥಿತರಿದ್ದರು.