ಡಿ.11ಕ್ಕೆ ರಾಜ್ಯ ಹೊಟೇಲ್ ಮಾಲಕರ ಸಂಘದ ರಾಜ್ಯ ಪ್ರಶಸ್ತಿ ಪ್ರದಾನ
ಉಡುಪಿ, ಡಿ.8: ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘಗಳ ಜಂಟಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಟ್ಟದ ‘ಆತಿಥ್ಯ ರತ್ನ’ ಹಾಗೂ ‘ಉದ್ಯಮ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಡಿ.11ರ ಮಂಗಳವಾರ ಸಂಜೆ 5ಗಂಟೆಗೆ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ ಎಂದು ರಾಜ್ಯ ಸಂಘದ ಅಧ್ಯಕ್ಷ ಬೀಜಾಡಿ ಚಂದ್ರಶೇಖರ ಹೆಬ್ಬಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಈ ಬಾರಿ ಹೊಟೇಲ್ ಉದ್ಯಮದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ 9 ಮಂದಿಗೆ ಆತಿಥ್ಯ ರತ್ನ ಹಾಗೂ ಮೂವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಮೈಸೂರಿನ ಬಿ.ಹಯವದನಾಚಾರ್ಯ, ಮೈಸೂರಿನ ಕೆ.ಚಂದ್ರಶೇಖರ ಹೆಗ್ಡೆ, ಅರಸಿಕೆರೆಯ ಬಿ.ಮಂಜುನಾಥ ರಾವ್, ಯಾದಗಿರಿಯ ಚಂದ್ರಶೇಖರ ಅರ್ಬೊಳ್, ಉಡುಪಿಯ ವಿಶ್ವನಾಥ ಶೆಣೈ, ಬೆಂಗಳೂರಿನ ಎಂ.ರಮೇಶ್ ಪೂಜಾರಿ, ತುಮಕೂರಿನ ಬಿ.ಅನಂತಯ್ಯ, ಮಂಗಳೂರಿನ ಸೂರ್ಯ ನಾರಾಯಣ ರಾವ್ ಹಾಗೂ ಬೆಂಗಳೂರಿನ ಎನ್.ರಾಘವೇಂದ್ರ ರಾವ್ ಇವರಿಗೆ ಆತಿಥ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಅದೇ ರೀತಿ ಬೆಂಗಳೂರಿನ ಎಸ್.ಷಡಕ್ಷರಿ, ಗೋಪಾಲಕೃಷ್ಣ ಶೆಟ್ಟಿ ಹಾಗೂ ಕೆರಾಡಿ ಚಂದ್ರಶೇಖರ ಶೆಟ್ಟಿ ಇವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚಂದ್ರಶೇಖರ ಹೆಬ್ಬಾರ್ ತಿಳಿಸಿದರು.
ಸಂಜೆ 5 ಗಂಟೆ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಆಶೀರ್ವದಿಸುವರು. ಕರ್ಣಾಟಕ ಬ್ಯಾಂಕಿನ ಎಂಡಿ ಎಂ.ಎಸ್.ಮಹಾಬಲೇಶ್ವರ ರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೀಜಾಡಿ ಚಂದ್ರಶೇಖರ ಹೆಬ್ಬಾರ್ ಅಧ್ಯಕ್ಷತೆ ವಹಿಸುವರು.
ಮಾಹೆಯ ಡಾ.ಎಚ್.ಎಸ್.ಬಲ್ಲಾಳ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೆಪಿಎಚ್‌ಆರ್‌ಎನ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಸಾಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಕೆಎಂಎಫ್‌ನ ರವಿರಾಜ್ ಹೆಗ್ಡೆ ಉಪಸ್ಥಿತರಿರುವರು.
ಇದಕ್ಕೆ ಮುನ್ನ ಅಪರಾಹ್ನ 2ರಿಂದ 4:30ರವರೆಗೆ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನವಿದೆ. ಸುದ್ದಿಗೋಷ್ಠಿಯಲ್ಲಿ ಉಡುಪಿ ಸಂಘದ ಕಾರ್ಯದರ್ಶಿ ನಾಗೇಶ್ ಭಟ, ಪ್ರದಾನ ಸಂಚಾಲ ಎಂ.ವಿಠಲ್ ಪೈ ಉಪಸ್ಥಿತ ರಿದ್ದರು.







