ಉಡುಪಿ: ಮೀನು ನಿಷೇಧ ವಾಪಾಸ್‌ಗೆ ಸ್ವಾಗತ
ಉಡುಪಿ, ಡಿ.8: ಕರಾವಳಿ ಕರ್ನಾಟಕದ ಮೀನು ಆಮದು ನಿಷೇಧವನ್ನು ಹಿಂಪಡೆದ ಗೋವಾ ಸರಕಾರದ ನಿರ್ಧಾರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.
ಗೋವಾ ಸರಕಾರ ಕಳೆದ 6ತಿಂಗಳಿನಿಂದ ಹೊರ ರಾಜ್ಯದ ಮೀನು ಆಮದು ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಮೀನುಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಈ ಬಗ್ಗೆ ಕರಾವಳಿಯ ಮೀನುಗಾರರ ಹಲವು ನಿಯೋಗ ಗಳು ಪಣಜಿಗೆ ತೆರಳಿ ನಿಷೇಧ ವಾಪಾಸು ಪಡೆಯುವಂತೆ ಮನವಿ ಸಲ್ಲಿಸಿತ್ತು. ಅದೇ ರೀತಿ ಉಭಯ ಜಿಲ್ಲೆಗಳ ಶಾಸಕರು ಮೀನುಗಾರರೊಂದಿಗೆ ತೆರಳಿ ನಿಷೇಧ ಹಿಂಪಡೆಯುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಗೋವಾ ಸರಕಾರ ಸ್ಪಂಧಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಆರೋಗ್ಯ ಸಚಿವ ವಿಶ್ವಜಿತ್ ರಾಣೆಗೆ ಅಭಿನಂದನೆ ಸಲ್ಲಿಸುವುದಾಗಿ ಸುವರ್ಣ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಕರಾವಳಿ ಭಾಗದ ಮೀನುಗಾರರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ, ಈ ಹಿಂದಿನಂತೆ ಪ್ರಾಮಾಣಿಕವಾಗಿ ಮೀನು ವ್ಯಾಪಾರವನ್ನು ಗೋವಾ ರಾಜ್ಯದೊಂದಿಗೆ ನಡೆಸಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.