ದೇಶದ ರಕ್ಷಣಾ ಕಾರ್ಯತಂತ್ರದ ವೇಳೆ ಮರು ಮಾಹಿತಿ ಪಡೆಯಲು ಹಿಂಜರಿಯುತ್ತರುವ ಕೇಂದ್ರ
ರಕ್ಷಣಾ ತಜ್ಞರ ವಿಷಾದ

ಚಂಡಿಗಡ,ಡಿ.8: ಸಾರ್ವಜನಿಕರು ಮತ್ತು ಸಶಸ್ತ್ರ ಪಡೆಗಳ ನಡುವೆ ಉತ್ತಮ ಸಂಪರ್ಕಕ್ಕಾಗಿ ರಾಷ್ಟ್ರೀಯ ಭದ್ರತೆಯ ಹೆಚ್ಚಿನ ಹಿತಾಸಕ್ತಿಯಲ್ಲಿ ಜನಾಭಿಪ್ರಾಯವನ್ನು ಕ್ರೋಢೀಕರಿಸಲು ಸೇನೆಯ ವಿಷಯಗಳಲ್ಲಿ ಹೆಚ್ಚಿನ ಮುಕ್ತತೆಯನ್ನು ತರುವ ಅಗತ್ಯವಿದೆ ಎಂದು ವಿವಿಧ ರಕ್ಷಣಾ ತಜ್ಞರು ಶನಿವಾರ ಇಲ್ಲಿ ಒತ್ತಿ ಹೇಳಿದರು.
ಸೇನಾ ವ್ಯವಸ್ಥೆಯಲ್ಲಿ ರಾಜಕೀಯವು ನಿಧಾನವಾಗಿ ತೂರಿಕೊಳ್ಳುತ್ತಿದೆ ಎಂದ ಅವರು,ಸಶಸ್ತ್ರ ಪಡೆಗಳ ರಾಜಕೀಕರಣ ಸಲ್ಲದು ಎಂದೂ ಹೇಳಿದರು.
ಇಲ್ಲಿ ನಡೆಯುತ್ತಿರುವ ಸೇನಾ ಸಾಹಿತ್ಯೋತ್ಸವ-2018ರ ಎರಡನೇ ದಿನ ಏರ್ಪಡಿಸಲಾಗಿದ್ದ ‘ಶೌರ್ಯ,ಇತಿಹಾಸ,ರಾಜಕೀಯ ಮತ್ತು ಮಾಧ್ಯಮಗಳು’ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ತಜ್ಞರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಶಸ್ತ್ರ ಪಡೆಗಳ ಸಾಹಸ ಕೃತ್ಯಗಳನ್ನು ಪ್ರಮುಖವಾಗಿ ಬಿಂಬಿಸುವಲ್ಲಿ ಸಿನೆಮಾ ಮತ್ತು ಮಾಧ್ಯಮಗಳ ಪಾತ್ರವು ಚರ್ಚೆಗಳ ಮುಖ್ಯ ಕೇಂದ್ರಬಿಂದುವಾಗಿತ್ತು ಎಂದು ಪಂಜಾಬ್ ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಲೆ.ಜ.(ನಿವೃತ್ತ)ಗಳಾದ ಎನ್.ಎಸ್.ಬ್ರಾರ್ ಮತ್ತು ಟಿ.ಎಸ್ .ಶೇರ್ಗಿಲ್ ಅವರು ಸಂವಾದಕರಲ್ಲಿ ಒಳಗೊಂಡಿದ್ದರು.
ಸಶಸ್ತ್ರ ಪಡೆಗಳು ದೇಶದ ಸಮಗ್ರತೆ,ಭದ್ರತೆ ಮತ್ತು ಸಾರ್ವಭೌಮತೆಯನ್ನು ಕಾಯ್ದುಕೊಳ್ಳುವ ಅತ್ಯಂತ ವೃತ್ತಿಪರ ಬದ್ಧತೆಯೊಂದಿಗೆ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಲು ಸಾಧ್ಯವಾಗುವಂತೆ ಅವುಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಮಾಧ್ಯಮಗಳು ಪೂರ್ವ ನಿಯಾಮಕ ಪಾತ್ರವನ್ನು ನಿರ್ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದ ಲೆ.ಜ(ನಿ) ಶೇರ್ಗಿಲ್ ಅವರು 26/11ರ ಮುಂಬೈ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸಿ,ಆ ಸಂದರ್ಭದಲ್ಲಿ ಮಾಧ್ಯಮಗಳ ನೇರ ಪ್ರಸಾರದಿಂದಾಗಿ ದಾಳಿಯ ರೂವಾರಿಗಳಿಗೆ ನಿಗ್ರಹ ಕಾರ್ಯಾಚರಣೆಗಳ ಬಗ್ಗೆ ತಿಳಿಯುವಂತಾಗಿತ್ತು ಎಂದು ನೆನಪಿಸಿದರು.
ರಾಷ್ಟ್ರೀಯ ಭದ್ರತೆ ಮತ್ತು ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಾರ್ವಜನಿಕವಾಗಿ ಸಾರ್ವತ್ರಿಕ ಚರ್ಚೆಗಳು ನಡೆಯುವ ಅಗತ್ಯವನ್ನು ಲೆ.ಜ(ನಿ) ಬ್ರಾರ್ ಒತ್ತಿಹೇಳಿದರು.
ದೇಶದ ರಕ್ಷಣಾ ಕಾರ್ಯತಂತ್ರವನ್ನು ರೂಪಿಸುವಾಗ ತಮ್ಮಿಂದ ಮರುಮಾಹಿತಿಗಳನ್ನು ಪಡೆದುಕೊಳ್ಳಲು ಕೇಂದ್ರ ಸರಕಾರದ ಹಿಂಜರಿಕೆಯ ಬಗ್ಗೆ ಕೆಲವು ಹಿರಿಯ ಸಮರಕಲಿಗಳು ಮತ್ತು ರಕ್ಷಣಾ ತಜ್ಞರು ವಿಷಾದವನ್ನು ವ್ಯಕ್ತಪಡಿಸಿದರು ಎಂದೂ ಹೇಳಿಕೆಯು ತಿಳಿಸಿದೆ.







