ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಬಿಗಿ ಪೊಲೀಸ್ ಸರ್ಪಗಾವಲು

ಬೆಂಗಳೂರು, ಡಿ.8: ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ವಿಧಾನಮಂಡಲ ಅಧಿವೇಶನಕ್ಕೆ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 5ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಓರ್ವ ನಗರದ ಪೊಲೀಸ್ ಆಯುಕ್ತ, 7 ಮಂದಿ ಪೊಲೀಸ್ ವರಿಷ್ಟಾಧಿಕಾರಿಗಳು, 11 ಮಂದಿ ಹೆಚ್ಚುವರಿ ಎಸ್ಪಿಗಳು, ಡಿಸಿಪಿಗಳು, ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳು ಸೇರಿದಂತೆ ಸೇರಿದಂತೆ ಒಟ್ಟು 4900 ಮಂದಿಯನ್ನು ಬಿಗಿ ಭದ್ರತೆ ಕಾರ್ಯಕ್ಕೆ ನೇಮಕ ಮಾಡಲಾಗಿದೆ.
ಸುವರ್ಣ ವಿಧಾನಸೌಧ, ರೈತರು ಮತ್ತು ಬಿಜೆಪಿ ಪ್ರತಿಭಟನೆ ಮತ್ತು ಸುವರ್ಣ ಗಾರ್ಡನ್ ಪ್ರತಿಭಟನೆ ಸ್ಥಳ, ಮುಖ್ಯಮಂತ್ರಿ ವಾಸ್ತವ್ಯದ ವಿಟಿಯು, ಸ್ಪೀಕರ್, ಸಭಾಪತಿ, ಸಚಿವರು ಮತ್ತು ಗಣ್ಯರು ವಾಸ್ತವ್ಯ ಹೂಡುವ ಸರ್ಕಿಟ್ ಹೌಸ್ ಸೇರಿದಂತೆ ಬೆಳಗಾವಿ ನಗರದಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಭದ್ರತೆ ಕಾರ್ಯಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಸಿಬ್ಬಂದಿಗೆ ಮತ್ತು ಮಹಿಳಾ ಸಿಬ್ಬಂದಿಗೆ (ಪ್ರತ್ಯೇಕ) ಊಟ-ವಸತಿ ಸೇರಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ನಗರದಲ್ಲಿನ ಸುಗಮ ಸಂಚಾರಕ್ಕೆ ಹೆಚ್ಚುವರಿ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕೆಎಸ್‌ಆರ್‌ಪಿ-30, ಜಿಲ್ಲಾ ಸಶಸ್ತ್ರ ದಳ-15, ಕ್ಷಿಪ್ರ ಸ್ಪಂದನಾ ತಂಡ-5, ವಿಧ್ವಂಸಕ ಕೃತ್ಯ ತಪಾಸಣಾ ತಂಡ-5, ಬಾಂಬ್ ನಿಷ್ಕ್ರಿಯ ದಳ, ಗರುಡಾ ಫೋರ್ಸ್, ವೈಯರ್‌ಲೆಸ್ ತಂಡ, ಗೃಹ ರಕ್ಷಕ ದಳ ನಿಯೋಜನೆ ಮಾಡಿದ್ದು, ಬೆಳಗಾವಿ ನಗರದಲ್ಲಿ ಅಧಿವೇಶನ ಮುಕ್ತಾಯಗೊಳ್ಳುವವರೆಗೂ ಬಿಗಿ ಪೊಲೀಸರು ಸರ್ಪಗಾವಲು ಇರಲಿದೆ.







