ಗೋವಿಂದರಾಜನಗರದಲ್ಲಿ 200 ಹಾಸಿಗೆಯ ಆಸ್ಪತ್ರೆ ನಿರ್ಮಾಣ: ವಿ.ಸೋಮಣ್ಣ

ಬೆಂಗಳೂರು, ಡಿ.8: ಇಲ್ಲಿನ ಗೋವಿಂದರಾಜನಗರದಲ್ಲಿ ಬಿಬಿಎಂಪಿ ಸಹಭಾಗಿತ್ವದಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಶಾಸಕ ವಿ.ಸೋಮಣ್ಣ ತಿಳಿಸಿದರು.
ಶನಿವಾರ ಗೋವಿಂದರಾಜನಗರದಲ್ಲಿ ವಿವಿಧ ಸೌಲಭ್ಯಗಳನ್ನು ಒಳಗೊಂಡ ಪಾರ್ಕ್, ನೇತಾಜಿ ಸುಭಾಷ್‌ಚಂದ್ರ ಬೋಸ್ ಪುತ್ಥಳಿ ಹಾಗೂ ಮಕ್ಕಳ ಆಟದ ಮೈದಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ದಿ.ಅನಂತಕುಮಾರ್ ನೆನಪಿನಲ್ಲಿ ಉದ್ಯಾನವನ ಸಮರ್ಪಣೆ ಮಾಡುತ್ತಿದ್ದೇವೆ. ಪಾರ್ಕ್‌ನಲ್ಲಿ ಎಫ್‌ಎಮ್ ಅಳವಡಿಕೆ ಮಾಡಲಾಗಿದ್ದು, ಸಂಗೀತದೊಂದಿಗೆ ಜನ ವಾಯುವಿಹಾರ, ಹಾಗೂ ಜಿಮ್ ಸಲಕರಣೆಗಳಲ್ಲಿ ವ್ಯಾಯಾಮ ಮಾಡಬಹುದಾಗಿದೆ ಎಂದರು. ಕೇವಲ ಎರಡು ತಿಂಗಳು ಇಪ್ಪತ್ತೆರೆಡು ದಿನಗಳಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಗೋವಿಂದರಾಜನಗರದಲ್ಲಿ ಐಎಎಸ್ ಕೋಚಿಂಗ್ ಸೆಂಟರ್ ಸ್ಥಾಪನೆ ಮಾಡಲಾಗುವುದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು 1.75 ಕೋಟಿ ವೆಚ್ಚದಲ್ಲಿ ಇ-ಲೈಬರಿ ಮಾಡಲಾಗಿದೆ ಮತ್ತು ಮುಂದಿನ ದಿನಗಳಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.
ಮೇಯರ್ ಗಂಗಾಂಬಿಕೆ ಮಾತನಾಡಿ, ಬೆಂಗಳೂರಲ್ಲಿ ಇಂದು ಪರಿಸರ ನಾಶವಾಗಿ ಕಾಂಕ್ರೀಟ್ ನಾಡಾಗಿದೆ. ಒಬ್ಬ ವ್ಯಕ್ತಿಗೆ 7 ಮರದ ಅವ್ಯಶಕತೆ ಇದೆ. ಹೀಗಾಗಿ ನಗರವನ್ನು ಹಸಿರುಮಯ ಮಾಡಲು ಪ್ರತಿಯೊಬ್ಬರು ಸಸಿ ನೆಟ್ಟು ಪರಿಸರ ರಕ್ಷಣೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಉಪಮೇಯರ್ ಭದ್ರೇಗೌಡ, ಪಾಲಿಕೆ ಸದಸ್ಯರಾದ ಶಿಲ್ಪಾಶ್ರೀಧರ್, ಉಮೇಶ್ ಶೆಟ್ಟಿ ಮತ್ತಿತರರಿದ್ದರು.





