ಮತದಾರರಿಗೆ ಬಂದೂಕು, ಹಣ, ಗನ್ ಮ್ಯಾನ್ ನೀಡುವುದಾಗಿ ಆಮಿಷವೊಡ್ಡಿದ ಬಿಜೆಪಿ ಸಚಿವ
ಸ್ಥಳೀಯ ಸಂಸ್ಥೆಗಳ ಚುನಾವಣೆ

ಹರ್ಯಾಣ, ಡಿ.8: ಇಲ್ಲಿನ ರೋಹ್ಟಕ್ ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ ರಾಜ್ಯ ಸಚಿವ ಮನೀಶ್ ಗ್ರೋವರ್ ಮತದಾರರಿಗೆ ‘ಬಂದೂಕುಗಳು, ಹಣ ಮತ್ತು ಗನ್ ಮ್ಯಾನ್’ ನೀಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ಹರ್ಯಾಣ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.
“ವಾರ್ಡ್ ನಂಬರ್ 10ರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವಾಗ ರಾಜ್ಯ ಸಚಿವ ಮನೀಶ್ ಗ್ರೋವರ್ ಮತದಾರರಿಗೆ ಬಂದೂಕುಗಳು, ಹಣ ಹಾಗು ಗನ್ ಮ್ಯಾನ್ ನೀಡುವುದಾಗಿ ಆಮಿಷವೊಡ್ಡಿರುವುದಾಗಿ ನಮಗೆ ಮಾಹಿತಿ ಲಭಿಸಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ” ಎಂದು ಚುನಾವಣಾ ಉಪ ಆಯುಕ್ತ ಪರ್ಮಾಲ್ ಸಿಂಗ್ ಹೇಳಿದ್ದಾರೆ.
“ಡಿಸೆಂಬರ್ 16ರವರೆಗೆ ಜನರಿಗೆ ಯಾವುದೇ ಕೊರತೆಯಾಗಬಾರದು. ನಾನು ನಿಮಗೆ ಬಂದೂಕುಗಳು, ಗನ್ ಮ್ಯಾನ್, ಹಣ ಏನು ಕೇಳಿದರೂ ಕೊಡಬಲ್ಲೆ” ಎಂದು ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮನೀಶ್ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಡಿಸೆಂಬರ್ 16ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.





