ಅರಣ್ಯಾಧಿಕಾರಿಗಳಿಂದ ಜಮೀನಿಗೆ ಅಕ್ರಮ ಪ್ರವೇಶ, ಹಲ್ಲೆ: ತರೀಕೆರೆ ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ್ ಆರೋಪ

ಚಿಕ್ಕಮಗಳೂರು, ಡಿ.8: ಅಧಿಕಾರ ದುರಪಯೋಗ ಪಡಿಸಿಕೊಂಡಿರುವ ತರೀಕೆರೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಲಂಚ ನೀಡದ ಕಾರಣಕ್ಕೆ ಭೂ ದಾಖಲೆಗಳನ್ನು ಹೊಂದಿರುವ ತನ್ನ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೇ, ವಿನಾಕಾರಣ ಹಲ್ಲೆ ಮಾಡಿ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಮಾನಸಿಕ, ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಈ ಸಂಬಂಧ ಸಂಬಂಧಿಸಿದ ಇಲಾಖಾದಿಕಾರಿಗಳಿಗೆ ದೂರು ನೀಡಿದ್ದು ಅರಣ್ಯಾಧಿಕಾರಿಗಳು ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ತಪ್ಪಿದಲ್ಲಿ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ತರೀಕೆರೆ ಪುರಸಭೆ ಮಾಜಿ ಅಧ್ಯಕ್ಷ ಟಿ.ಆರ್.ನಾಗರಾಜ್ ಮನವಿ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಅರಸೀಕೆರೆ ಗ್ರಾಮದ ಸ.ನಂ.19ರಲ್ಲಿ ತಾನು ಕ್ರಯಕ್ಕೆ ಪಡೆದಿರುವ 4 ಎಕರೆ ಜಮೀನು ಹಾಗೂ ಸ.ನಂ.11ರಲ್ಲಿ 3.36 ಎಕರೆ ಜಮೀನು ಹೊಂದಿದ್ದೇನೆ. ಈ ಜಮೀನುಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ನಡೆದು ಪಕ್ಕಾಪೋಡಿಯಾಗಿ ದರಖಾಸ್ತು ಆಗಿದೆ. ಈ ಸಂಬಂಧ ಎಲ್ಲ ದಾಖಲಾತಿಗಳಿದ್ದರೂ ಲಕ್ಕವಳ್ಳಿ ವಲಯಾರಣ್ಯಾಧಿಕಾರಿ ಚಂದ್ರಶೇಖರ್ ರೆಡ್ಡಿ, ತರೀಕೆರೆ ವಲಯಾರಣ್ಯಾಧಿಕಾರಿ ಚರಣ್ ಕುಮಾರ್ ಹಾಗೂ ಎಸಿಎಫ್ ರವೀಂದ್ರ ಕುಮಾರ್ ಅವರು ಈ ಜಮೀನಿನ ಸಂಬಂಧ ವಿನಾಕಾರಣ ಕಿರುಕುಳ ನೀಡಿದ್ದರು. ಈ ಸಂಬಂಧ ತಹಶೀಲ್ದಾರ್ ರಿಗೆ ದೂರು ನೀಡಿದಾಗ ತನಗೆ ಪೊಲೀಸ್ ರಕ್ಷಣೆ ನೀಡಿದ್ದರು. ಆದರೆ ಅಧಿಕಾರಿಗಳು ತಾನು ಲಂಚ ನೀಡದ ಕಾರಣಕ್ಕೆ ತನ್ನ ಜಮೀನಿಗೆ ಪದೇ ಪದೇ ಅತಿಕ್ರಮ ಪ್ರವೇಶ ಮಾಡಿ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಂಬಂಧ ತನ್ನ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆಂದು ನಾಗರಾಜ್ ದೂರಿದರು.
ತಾನು ಸಮಾಜ ಸೇವಕನಾಗಿದ್ದು, ಈ ಹಿಂದೆ ತರೀಕೆರೆ ಪುರಸಭೆ, ತಾಲೂಕು ಎಪಿಎಂಸಿ ಅಧ್ಯಕ್ಷನಾಗಿದ್ದೇನೆ. ತನ್ನ ಕೋಟ್ಯಂತರ ಬೆಲೆ ಬಾಳುವ ಜಮೀನುಗಳನ್ನು ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯಕ್ಕೆ ಮಾಡಿದ್ದೇನೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಶ್ರೀಗಂಧದ ತೋಟ ನಿರ್ಮಿಸಿದ್ದೇನೆ. ಈ ಕಾರಣಕ್ಕೆ ರಾಜ್ಯ ಸರಕಾರದಿಂದ ಸನ್ಮಾನಿತನಾಗಿದ್ದೇನೆ. ಇಂತಹ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ತನ್ನ ವಿರುದ್ಧ ಅರಣ್ಯಾಧಿಕಾರಿಗಳು ವಿನಾಕಾರಣ ಮಾಜಿ ಶಾಸಕ ಶ್ರೀನಿವಾಸ್‍ರ ಕೃಪಾಕಟಾಕ್ಷದಿಂದ ದೈಹಿಕ ಹಲ್ಲೆ ನಡೆಸಿ, ಪದೇ ಪದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಮೂವರು ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಇಲಾಖಾ ತನಿಖೆಗೆ ಸೂಚಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗಕ್ಕೂ ದೂರ ನೀಡಲಾಗಿದ್ದು, ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಿ ಅಮಾನತು ಮಾಡಬೇಕು. ತಪ್ಪಿದಲ್ಲಿ ತನಗೆ ದಯಾಮರಣಕ್ಕೆ ಅವಕಾಶ ನೀಡಬೇಕೆಂದ ಅವರು ಸರಕಾರವನ್ನು ಆಗ್ರಹಿಸಿದರು.







