ಪದವಿ ಎನ್ನುವುದು ಕಲಿಕೆಯ ಕೊನೆಯಲ್ಲ: ಡಾ. ಕರಿಸಿದ್ದಪ್ಪ
'ಗ್ರಾಜ್ಯುವೇಶನ್ ಡೇ-2018'

ಪುತ್ತೂರು, ಡಿ. 8: ಪದವಿ ಎನ್ನುವುದು ಕಲಿಕೆಯ ಕೊನೆಯಲ್ಲ, ಮಾನವ ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಏನಾದರೊಂದು ಹೊಸ ವಿಚಾರಗಳನ್ನು ಕಲಿಯುತ್ತಲೇ ಇರುತ್ತಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಕರಿಸಿದ್ದಪ್ಪ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ಶನಿವಾರ ನಡೆದ ಪದವಿ ಪ್ರಧಾನ ಸಮಾರಂಭ 'ಗ್ರಾಜ್ಯುವೇಶನ್ ಡೇ-2018' ದಲ್ಲಿ ಭಾಗವಹಿಸಿ ಮಾತನಾಡಿದರು.
ತಂತ್ರಜ್ಞಾನಗಳು ವ್ಯಾಪಕವಾಗಿ ಅಭಿವೃದ್ಧಿಯಾಗುತ್ತಿದ್ದು ಇಂದಿನಿಂದ ನಾಳೆಗೆ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಈ ಬದಲಾವಣೆಗೆ ನಾವು ತಕ್ಷಣ ಸ್ಪಂದಿಸಿ ಬದಲಾಗದೇ ಹೋದರೆ ಇತರರಿಗಿಂತ ನಾವು ಹಿಂದುಳಿಯುತ್ತೇವೆ ಎಂದರು. ಸಿಗುವ ಸೌಲಭ್ಯಗಳನ್ನು ಜಾಗ್ರತೆಯಾಗಿ ಬಳಸಿಕೊಳ್ಳಬೇಕು ಅದನ್ನೇ ಒಂದು ಚಟವಾಗಿಸಿಕೊಳ್ಳಬಾರದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಬಾಲ್ಯಾವಸ್ಥೆಯಿಂದ ಇದುವರೆಗೆ ಹಂತ ಹಂತವಾಗಿ ಬೆನ್ನು ತಟ್ಟುವ ಅಧ್ಯಾಪಕರು ಮತ್ತು ಪೊಷಕರಿದ್ದರು ಇನ್ನು ಮುಂದೆ ನೀವಾಗಿಯೇ ಸಮಾಜದಲ್ಲಿ ಬೆಳೆಯುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಸಮಾಜದಿಂದ ಪಡೆದದ್ದರ ಕಿಂಚಿತ್ತನ್ನಾದರೂ ತಿರುಗಿ ದೇಶಕ್ಕೆ ಸಂದಾಯ ಮಾಡುವ ಋಣಭಾರ ಪ್ರತಿಯೊಬ್ಬರ ಮೇಲಿದೆ ಇದನ್ನು ತಿಳಿದುಕೊಂಡು ದೇಶದ ಅಭಿವೃದ್ದಿಯಲ್ಲಿ ಕೈಜೋಡಿಸಬೇಕು ಎಂದರು.
ಸಮಾರಂಭದಲ್ಲಿ 2017-18 ನೇ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಉನ್ನತ ಸಾಧನೆಯನ್ನು ಮಾಡಿದ 6 ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು. ಇತರರಿಗೆ ಪದವಿ ಪ್ರಮಾಣ ಪತ್ರವನ್ನು ನೀಡಲಾಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ, ಕೋಶಾಧಿಕಾರಿ ಮುರಳೀಧರ ಭಟ್, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ವಿಶ್ವಾಸ್ ಶೆಣೈ, ಕ್ಯಾಂಪಸ್ ನಿರ್ದೇಶಕ ಪ್ರೊ. ವಿವೇಕ್ ರಂಜನ್ ಭಂಡಾರಿ, ವಿಭಾಗ ಮುಖ್ಯಸ್ಥರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮಂಗಳೂರು ವಿಭಾಗದ ವಿಶೇಷಾಧಿಕಾರಿ ಡಾ.ಶಿವಕುಮಾರ್, ಸುಳ್ಯದ ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಜ್ಞಾನೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಸ್ವಾಗತಿಸಿ ಪ್ರಸ್ತಾವನೆಗೈದರು, ಪ್ರೊ. ಭಾಸ್ಕರ್ ಕುಲಕರ್ಣಿ ವಂದಿಸಿದರು. ಉಪನ್ಯಾಸಕಿಯರಾದ ಸಂಗೀತಾ.ಬಿ.ಎಲ್ ಮತ್ತು ಮಾಧವಿ ಪೈ ಕಾರ್ಯಕ್ರಮ ನಿರೂಪಿಸಿದರು.