ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 14 ಮಂದಿ ಸಾಧಕರಿಗೆ ಸನ್ಮಾನ
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಬಂಟ್ವಾಳ, ಡಿ. 8: ಫರಂಗಿಪೇಟೆ ಸೇವಾಂಜಲಿ ಸಭಾಂಗಣದ ಡಾ.ಎಫ್.ಎಚ್.ಒಡೆಯರ್ ವೇದಿಕೆಯಲ್ಲಿ ನಡೆದ 19ನೆ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 14 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.
ಶನಿವಾರ ಸಂಜೆ ಸಮ್ಮೇಳನದ ಸಮಾರೋಪಕ್ಕೆ ಮುನ್ನ ನಡೆದ ಸನ್ಮಾನ ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಬಂಟ್ವಾಳದಲ್ಲಿ ತನ್ನ ಕನಸಿನ ಕೂಸಾದ ಕವಿ ಪಂಜೆ ಮಂಗೇಶ್ ರಾಯರ ಸಭಾಭವನ ಐದು ಕೋ.ರೂ.ವೆಚ್ಚದಲ್ಲಿ ನಿರ್ಮಣ ಕಾರ್ಯ ಆರಂಭ ಗೊಂಡಿದ್ದು, ಇದಕ್ಕೆ ಹೆಚ್ಚುವರಿ 3 ಕೋಟಿ ರೂ.ವಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದ ಅವರು, ಜಾತಿ, ಧರ್ಮವನ್ನು ಎಲ್ಲೆ ಮೀರಿ ಪ್ರತಿಯೊಬ್ಬರು ಸಾಹಿತ್ಯಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕೆಂದರು.
ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಮ್ಮೇಳನಾಧ್ಯಕ್ಷ ಪ್ರೊ.ತುಕರಾಮ ಪೂಜಾರಿ, ಮಂಚಿ ವ್ಯ.ಸೇ.ಸ.ಸಂಘದ ಅಧ್ಯಕ್ಷ ಉಮರ್ ಮಂಚಿ, ಸಾಧನಾ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಬಂಟ್ವಾಳ ತಾ ಲೂಕು ಕಸಾಪ ಅಧ್ಯಕ್ಷ ಮೋಹನ್ ರಾವ್, ಸ್ವಾಗತ ಸಮಿತಿ ಅಧ್ಯಕ್ಷ ಗಂಗಾಧರ ಆಳ್ವ, ಕಾರ್ಯಾಧ್ಯಕ್ಷ ಕೃಷ್ಣಕುಮಾರ್ ಪೂಂಜ ಮತ್ತಿತರರಿದ್ದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳ ಸಾಧಕರಾದ ವೇ.ಮೂ.ಪೊಳಲಿ ಸುಬ್ರಹ್ಮಣ್ಯ ತಂತ್ರಿ (ಧಾರ್ಮಿಕ), ಎಂ.ಕೆ.ಗುರುವಪ್ಪ ಮೇರಮಜಲು (ಜಾನಪದ ಕಲೆ), ಅಜಿತ್ ಕುಮಾರ್ ರಾವ್ (ವಕೀಲ, ಸಾಹಿತ್ಯ ಪರಿಚಾರಕ), ವಿಶ್ವನಾಥ ಶೆಟ್ಟಿ ಸುವರ್ಣನಾಡು( ಯಕ್ಷಗಾನ), ಪ್ರಕಾಶ್ ಕಾರಂತ ನರಿಕೊಂಬು(ಸಮಾಜಸೇವೆ), ಭಾಸ್ಕರ ಚೌಟ ಕುಮ್ಡೇಲು (ಸಂಘಟನೆ), ಮೀನಾಕ್ಷಿ ನಾರಾಯಣ ಆಚಾರ್ಯ(ನಾಟಿ ವೈದ್ಯೆ), ಶಂಕರ್ ಕಲ್ಲಡ್ಕ ಹಾಗೂ ಸದಾನಂದ ಆಳ್ವ ತೇವು(ಕ್ರೀಡೆ), ಹರೀಶ್ ಪೆರ್ಗಡೆ (ಸಮಾಜಸೇವೆ), ಎಸ್.ಎಂ.ಅಬೂಬಕರ್ ಸುರಿಬೈಲು ಹಾಗೂ ಬೊಂಡಾಲ ಸಚ್ಚಿದಾನಂದ ಶೆಟ್ಟಿ(ಶಿಕ್ಷಣ), ಕರ್ಗಲ್ಲು ವಿಶ್ವೇಶ್ವರ ಭಟ್(ಯಕ್ಷ ಶಿಕ್ಷಕ) ಹಾಗೂ ಜಯಂತ ನಾಯಕ್ ಪಾನೆಮಂಗಳೂರು(ಸ್ಕೌಟ್) ಅವರನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಂಚಿ ವ್ಯ.ಸೇ.ಸ.ಸಂ. ಅದ್ಯಕ್ಷ ಉಮರ್ ಮಂಚಿ, ಸಾಧನ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಅಭಿನಂದನೆ
ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಬಂಟ್ವಾಳ ತಾಲೂಕಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಾದ ಪ್ರತೀಕ್ಷಾ, ಫಾತಿಮಾ ಮುನೀಶಾ, ಅನುಶ್ರೀ, ಪ್ರತೀಕ್ಷಾ, ಮಿತೇಶ್ ಹಾಗೂ ಕಾರ್ತಿಕ್ ಅವರನ್ನು ಅಳಿಕೆ ಸತ್ಯಸಾಯೀ ಲೋಕ ಸೇವಾ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಗಂಗಾಧರ್ ಭಟ್ ಅಳಿಕೆ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿಶ್ರಾಂತ ಶಿಕ್ಷಕರಾದ ರಮೇಶ್ ಎಂ.ಬಾಯಾರು, ಗಣಪತಿ ಪದ್ಯಾಣ ಉಪಸ್ಥಿತರಿದ್ದರು.
ಗೋಷ್ಠಿಗಳು:
ಅಳಿಕೆ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ "ಸಾಹಿತ್ಯ-ಯುವ ಸ್ಪಂದನ", ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಮ್ಮಯ ಬಂಟ್ವಾಳ ಅವರ ಅಧ್ಯಕ್ಷತೆಯಲ್ಲಿ "ಬಂಟ್ವಾಳದ ಇತಿಹಾಸ"ದಲ್ಲಿ ಪ್ರೊ. ಸತೀಶ್ ಗಟ್ಟಿ ಹಾಗೂ ಪ್ರೊ. ರಾಜಮಣಿ ರಾಮಕುಂಜ ವಿಷಯ ಮಂಡಿಸಿದರು.
ವಿಶ್ರಾಂತ ಶಿಕ್ಷಕ ಸೇರಾಜೆ ಶ್ರೀನಿವಾಸ ಭಟ್ ಅವರ ಅಧ್ಯಕ್ಷತೆಯಲ್ಲಿ "ಸಾಹಿತ್ಯ ಪ್ರಸ್ತುತಿ" ವಿಟ್ಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಅವರ ಅಧ್ಯಕ್ಷತೆಯಲ್ಲಿ"ಮರೆಯಲಾಗದ ಮಹಾನುಭಾವರು-ನಡಿನಮನ", ಎಸ್‍ವಿಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಅವರ ಅಧ್ಯಕ್ಷತೆಯಲ್ಲಿ "ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ", ಬಂಟ್ವಾಳ ಎಎಸ್ಪಿ ಸೋನಾವಣೆ ಋಷಿಕೇಶ್ ಭಗವಾನ್ ಅವರ ಅಧ್ಯಕ್ಷತೆಯಲ್ಲಿ " ಮಾದಕ ವಸ್ತುಗಳು ಹಾಗೂ ಸೈಬರ್ ಕ್ರೈಂ ಜಾಗೃತಿ" ಅರಿವು ಕಾರ್ಯಕ್ರಮ ನಡೆಯಿತು.