ಬುಲಂದ್‌ಶಹರ್ ಪೊಲೀಸ್ ಮುಖ್ಯಸ್ಥರ ಸಹಿತ ಮೂವರು ಅಧಿಕಾರಿಗಳ ವರ್ಗಾವಣೆ

ಲಕ್ನೊ, ಡಿ.8: ಬುಲಂದ್‌ಶಹರ್ ಹಿಂಸಾಚಾರಕ್ಕೆ ಸಂಬಂಧಿಸಿ ಘರ್ಷಣೆ ನಿಯಂತ್ರಿಸಲು ವಿಫಲರಾದ ಕಾರಣಕ್ಕೆ ಪೊಲೀಸ್ ಮುಖ್ಯಸ್ಥರ ಸಹಿತ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಬುಲಂದ್‌ಶಹರ್ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕ ಕೃಷ್ಣಬಹಾದುರ್ ಸಿಂಗ್‌ರನ್ನು ಲಕ್ನೋಗೆ ವರ್ಗಾಯಿಸಲಾಗಿದ್ದು ಅವರ ಸ್ಥಾನಕ್ಕೆ ಸೀತಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿದ್ದ ಪ್ರಭಾಕರ್ ಚೌಧರಿಯನ್ನು ನಿಯುಕ್ತಿಗೊಳಿಸಲಾಗಿದೆ.
ಇತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ವರ್ಗಾಯಿಸಲಾಗಿದೆ. ಗೋ ಹತ್ಯೆ ನಡೆದಿದೆ ಎಂಬ ವದಂತಿಯ ಕಾರಣ ನಡೆದಿದ್ದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದರು. ಪ್ರಕರಣದ ಹಿನ್ನೆಲೆಯಲ್ಲಿ ಡಿಜಿಪಿ ಒ.ಪಿ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯ ಬಳಿಕ ಮುಖ್ಯಮಂತ್ರಿಗೆ ಸಲ್ಲಿಸಿದ ವರದಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಆಡಳಿತ ಹಾಗೂ ಪೊಲೀಸರು ಸಕಾಲಿಕ ಕ್ರಮ ಕೈಗೊಳ್ಳಲು ವಿಫಲರಾಗಿದ್ದು ಹಾಗೂ ಹಿರಿಯ ಅಧಿಕಾರಿಗಳು ಘಟನೆಯ ಸ್ಥಳಕ್ಕೆ ವಿಳಂಬವಾಗಿ ತೆರಳಿದ್ದು ಹಿಂಸಾಚಾರದ ಘಟನೆಗೆ ಕಾರಣವಾಗಿದೆ . ಅಧಿಕಾರಿಗಳು ತೋರಿದ ನಿರ್ಲಕ್ಷದ ಧೋರಣೆಯಿಂದಾಗಿ ಪರಿಸ್ಥಿತಿ ನಿಯಂತ್ರಣ ಮೀರಿತು ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.