ದಾವಣಗೆರೆ: ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿ ಬಂಧನ

ದಾವಣಗೆರೆ,ಡಿ.8: ಕಳೆದ ಎರಡು ತಿಂಗಳ ಹಿಂದೆ ಜಿಲ್ಲೆಯ ಜನರಲ್ಲಿ ಅತಂಕ ಸೃಷ್ಟಿಸಿದ್ದ ತಾಲೂಕಿನ ಕಕ್ಕರಗೊಳ್ಳದ ಗ್ರಾಮದ ಯುವತಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾಹಿತನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕಕ್ಕರಗೊಳ್ಳ ಗ್ರಾಮದ ರಂಗಸ್ವಾಮಿ (24) ಬಂಧಿತ ಆರೋಪಿ. ಆರೋಪಿ ಸಾಕ್ಷ್ಯಧಾರಗಳನ್ನು ಉಳಿಸದೇ ತಲೆಮರೆಸಿಕೊಂಡಿದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಿಸಿಬಿಐ ಅಧಿಕಾರಿ ಎಸ್.ಕೆ. ಶಂಕರ ಮತ್ತು ಮಹಿಳಾ ಠಾಣೆ ಪಿಎಸ್‍ಐ ನಾಗಮ್ಮ ಅವರ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಲಾಗಿತ್ತು. ಆರೋಪಿತನನ್ನು ಬಂಧಿಸುವಲ್ಲಿ ನಮ್ಮ ಸಿಬ್ಬಂದಿಗಳ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಆರ್. ಚೇತನ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ ಅವರನ್ನು ಅಕ್ಟೋಬರ್.10 ರಂದು ಬಸ್ ನಿಲ್ದಾಣದಲ್ಲಿ ನಿಂತಿದ್ದನ್ನು ಗಮನಿಸಿದ ಆರೋಪಿ ಊರಿಗೆ ಬಿಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ನಂತರ ಮಧ್ಯದಾರಿಯಲ್ಲಿ ಅಸಭ್ಯವಾಗಿ ವರ್ತಿಸಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ಅಲ್ಲದೆ, ಆರೋಪಿಯ ಹೇಳಿಕೆ ಮತ್ತು ವೈದ್ಯರ ವರದಿಯು ಸಹ ಅದನ್ನೇ ದೃಢಪಡಿಸಿದೆ. ಆರೋಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗಳಾದ ಆಶೋಕ, ಮಜೀದ್, ರಾಘವೇಂದ್ರ, ಷಣ್ಮುಖ, ಸಿದ್ದೇಶ್, ಧನರಾಜ್, ಬಾಲರಾಜ್, ಹನುಮಂತಪ್ಪ, ಶಾಂತರಾಜ್ ರಮೇಶ್ ನಾಯ್ಕ್, ನಾಗರಾಜ್, ರಾಮಚಂದ್ರಜಾಧವ್, ರಮೇಶ ಅವರನ್ನು ಅಭಿನಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಟೆ.ಜಿ. ಉದೇಶ್ ಇತರರು ಇದ್ದರು.







