ಡಿಸ್ನಿಲ್ಯಾಂಡ್‍ಗೆ ರೈತರ ಭೂಮಿ ಪಡೆಯುವುದಿಲ್ಲ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ
ಸ್ಥಳ ಪರಿವೀಕ್ಷಣೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ

ಮಂಡ್ಯ, ಡಿ.8: ಕೃಷ್ಣರಾಜಸಾಗರ (ಕೆಆರ್‍ಎಸ್) ಜಲಾಶಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಡಿಸ್ನಿಲ್ಯಾಂಡ್ ಉದ್ಯಾನವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಕಂದಾಯ, ನೀರಾವರಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಸೇರಿದಂತೆ 336 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೃಷ್ಣರಾಜಸಾಗರ ಬೃಂದಾವನದ ಉನ್ನತೀಕರಣ ಹಾಗೂ ದೇಶ ಮತ್ತು ವಿದೇಶ ಪ್ರವಾಸಿಗರಿಗೆ ಪ್ರಮುಖ ಪ್ರವಾಸೋದ್ಯಮ ಆಕರ್ಷಣೀಯ ಕ್ರೇಂದ್ರವನ್ನಾಗಿ ಪರಿವರ್ತಿಸುವ ಡಿಸ್ನಿಲ್ಯಾಂಡ್ ಯೋಜನೆಯ ಅನುಷ್ಠಾನ ಸಂಬಂಧ ಶನಿವಾರ ಅವರು ಕೃಷ್ಣರಾಜಸಾಗರ ಜಲಾಶಯ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿವೀಕ್ಷಿಸಿದರು.
ಸ್ಥಳ ವೀಕ್ಷಣೆಯ ನಂತರ ಕೃಷ್ಣರಾಜಸಾಗರ ಜಲಾಶಯ ಆವರಣದಲ್ಲಿರುವ ಕಾವೇರಿ ಭವನದಲ್ಲಿ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಚಿವರು, ಜನಪ್ರತಿನಿಧಿಗಳು, ವಿವಿಧ ಕ್ಷೇತ್ರದ ತಜ್ಞರು, ಇಲಾಖೆಗಳ ಅಧಿಕಾರಿಗಳು ಒಳಗೊಂಡ ಸಮಿತಿಯನ್ನು ಸೂಚಿಸಲಾಗುವುದು ಎಂದರು.
ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ದೇಶದ ಸಂಸ್ಕೃತಿ, ಇತಿಹಾಸ ಉಳಿಸಿ ಬೆಳೆಸುವ ದೃಷ್ಠಿಯಿಂದ ಕೃಷ್ಣರಾಜಸಾಗರ ಜಲಾಶಯದ ಪ್ರದೇಶವನ್ನು ಮೇಲ್ದರ್ಜೆಗೇರಿಸಲಾಗುವುದು. ಬೃಂದಾವನವನ್ನು ವೀಕ್ಷಿಸಲು ಸಾವಿರಾರು ಜನರು ಬರುತ್ತಾರೆ. ಆದರೆ, ದಿನನಿತ್ಯ ಹತ್ತರಿಂದ ಹದಿನೈದು ಸಾವಿರ ಪ್ರವಾಸಿಗರು ಬರುವಂತೆ ಈ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಅವರು ತಿಳಿಸಿದರು.
ದೇಶದಲ್ಲೇ ಅತೀ ದೊಡ್ಡ ಹಾಗೂ ಆಕರ್ಷಣೀಯ ಪ್ರವಾಸಿ ಕೇಂದ್ರ ಮಾಡುವುದು ನಮ್ಮ ಗುರಿಯಾಗಿದ್ದು, ಎರಡೂವರೆ ವರ್ಷದಲ್ಲಿ ಕೃಷ್ಣರಾಜಸಾಗರ ಅಣೆಕಟ್ಟಿಗೆ ಧಕ್ಕೆಯಾಗದ ರೀತಿಯಲ್ಲಿ ಕೃಷ್ಣರಾಜಸಾಗರ ಜಲಾಶಯದ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯಿಂದ 2000 ಜನರಿಗೆ ನೇರ ಉದ್ಯೋಗ ನೀಡಲು ಹಾಗೂ 15,000 ಜನರಿಗೆ ಪರೋಕ್ಷ ಉದ್ಯೋಗ ನೀಡಲು ಉದ್ದೇಶಿಲಾಗಿದೆ. ಅಲ್ಲದೇ ಸ್ಥಳೀಯ ಪ್ರದೇಶ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸಿದರು.
ಸರಕಾರ ಅಥವಾ ಕಾವೇರಿ ನೀರಾವರಿ ನಿಗಮವು ಈ ಯೋಜನೆಗಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಸಂಪೂರ್ಣ ವೆಚ್ಚವನ್ನು ಗುತ್ತಿಗೆದಾರರು ಹೊಂದಲಿದ್ದು, ಕಾವೇರಿ ನೀರಾವರಿ ನಿಗಮವು ಯೋಜನೆಯ ಮಾಲಕರಾಗಿರುತ್ತಾರೆ. ಟಿಂಡರ್ ನಂತರ ರಿಯಾಯಿತಿ ಮತ್ತು ಆಪರೇಷನ್ ಹಾಗೂ ನಿರ್ವಹಣೆ ಹಕ್ಕಗಳನ್ನು ಮಾತ್ರ ನೀಡಲಾಗುವುದು. ಇದರಿಂದ ಸರಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂದು ಅವರು ತಿಳಿಸಿದರು.
ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಗೆ ಕೇಂದ್ರ ಸರಕಾರ ಬಂಡವಾಳ ಹಾಕಿ ಸ್ಥಾಪಿಸಿದೆ. ಆದರೆ, ಜಲಾಶಯದ ಬಳಿ ನಾವು ನಿರ್ಮಿಸುತ್ತಿರುವ ಕಾವೇರಿ ಪ್ರತಿಮೆಗೆ ರಾಜ್ಯ ಸರಕಾರ ಒಂದು ರೂ. ಬಂಡವಾಳ ಹಾಕುವುದಿಲ್ಲ. ಇದನ್ನೂ ಖಾಸಗಿಯವರು ಭರಿಸುತ್ತಾರೆ. ನೇತೃತ್ವ ಮಾತ್ರ ಸರಕಾರದ್ದಾಗಿರುತ್ತದೆ ಎಂದು ಅವರು ಹೇಳಿದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಣ್ಣ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಎಂ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ, ಅಧೀಕ್ಷಕ ಅಭಿಯಂತರ ರಮಣೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಗೈರು
ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಸಚಿವ ಡಿ.ಕೆ.ಶಿವಕುಮಾರ್ ನಡೆಸಿದ ಸಭೆಗೆ ಗೈರು ಹಾಜರಾಗಿದ್ದರು. 'ರವೀಂದ್ರ ಶ್ರೀಕಂಠಯ್ಯ ಅವರನ್ನು ಕರೆದು ಮಾತನಾಡಿ ಅವರ ಸಲಹೆಯನ್ನೂ ಪಡೆದುಕೊಳ್ಳುತ್ತೇವೆ. ಬೇರೆ ಕೆಲಸ ಇರುವುದರಿಂದ ಅವರು ಸಭೆಗೆ ಆಗಮಿಸಿಲ್ಲ' ಎಂದು ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.







