ಮಂಡ್ಯ: ಅಂಬರೀಷ್ ಹುಟ್ಟೂರಿಗೆ ಪತ್ನಿ ಸುಮಲತಾ, ಪುತ್ರ ಭೇಟಿ; ಸಮಾಧಿಗೆ ಪೂಜೆ

ಮಂಡ್ಯ, ಡಿ.8: ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮಾಜಿ ಸಚಿವ, ಚಿತ್ರನಟ ದಿವಂಗತ ಅಂಬರೀಷ್ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಅವರು ತಮ್ಮ ಮನೆ ದೇವರು ಚಿಕ್ಕರಸಿನಕೆರೆಯಲ್ಲಿ ಶನಿವಾರ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅಂಬರೀಷ್ ಮತ್ತು ಚಿಕ್ಕರಸಿನಕೆರೆ ಪುಣ್ಯ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದ್ದು, ಕ್ಷೇತ್ರ ಅಭಿವೃದ್ಧಿಪಡಿಸಲ ಹೆಗಲುಕೊಟ್ಟಿದ್ದರು. ಇದೇ ಪ್ರಥಮ ಬಾರಿಗೆ ಸುಮಲತಾ ಮತ್ತು ಅಭಿಷೇಕ್ ಶ್ರೀ ಕಾಲಭೈರವೇಶ್ವರನ ಮೊರೆ ಹೋಗಿ ಶ್ರೀಕ್ಷೆತ್ರ ಬಸವಪ್ಪನ ಆರ್ಶೀವಾದ ಪಡೆದರು. ಬಳಿಕ ನೆರೆದಿದ್ದ ಅಂಬರೀಷ್ ಅಭಿಮಾನಿಗಳು ಮಾತನಾಡಿ, ಶ್ರೀ ಕ್ಷೇತ್ರ ಅಭಿವೃದ್ದಿ ಹೊಂದಲು ಅಂಬರೀಷ್ ಅವರ ಕೊಡುಗೆ ಅಪಾರವಾಗಿದ್ದು ಅವರ ಸಾವು ನಿಜಕ್ಕೂ ನಮಗೆ ತುಂಬಾಲಾರದ ನಷ್ಟ ಉಂಟುಮಾಡಿದೆ ಎಂದು ಭಾವುಕರಾದರು.
ಇದಕ್ಕೆ ಸುಮಲತಾ ಮತ್ತು ಅಭಿಷೇಕ್‍ಗೌಡ ಪ್ರತಿಕ್ರಿಯಿಸಿ, ಅಂಬರೀಷ್ ಅವರ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಾವು ಬೆಲೆ ಕಟ್ಟಲಾಗುವುದಿಲ್ಲ. ಅವರಿಲ್ಲದ ಈ ದಿನ ನಮಗೆ ಶೂನ್ಯ ಎಂದು ಕಣ್ಣೀರು ಹಾಕಿದರು.
ಅಂಬರೀಷ್ ಸ್ವಗ್ರಾಮ ಡಿ.ಎ.ಕೆರೆಗೂ ಭೇಟಿ:
ಕಾಲಭೈರವೇಶ್ವರ ದೇವಾಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುಮಲತಾ ಮತ್ತು ಪುತ್ರ ಅಭಿಷೇಕ್, ಅಂಬರೀಷ್ ಅವರ ಸ್ವಗ್ರಾಮ ದೊಡ್ಡರಸಿನಕೆರೆಗೆ ಭೇಟಿ ನೀಡಿ ಅಂಬರೀಷ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಬೆಂಗಳೂರಿನಿಂದ ಅಂಬರೀಷ್ ಅವರ ಅಸ್ಥಿ ತಂದು ತಾತ್ಕಲಿಕವಾಗಿ ಸಮಾಧಿ ನಿರ್ಮಿಸಿ ತಿಥಿ ಕಾರ್ಯ ಮಾಡಿದ್ದ ಗ್ರಾಮಸ್ಥರು, ಸುಮಲತಾ ಮತ್ತು ಅಭಿಷೇಕ್ ಆಗಮಿಸುತ್ತಿದ್ದಂತೆ ಜೈಕಾರ ಹಾಕಿ ಜೂನಿಯರ್ ರೆಬಲ್ ಎಂದು ಅಭಿಷೇಕ್ ಅವರನ್ನು ಕೂಗಿದರು. ನಂತರ ಅಂಬರೀಷ್ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿದರು. ಈ ಸ್ಥಳದಲ್ಲಿ ಅಂಬರೀಷ್ ಅವರ ಪುತ್ಥಳಿ ಮತ್ತು ಸ್ಮಾರಕ ನಿರ್ಮಿಸಬೇಕೆಂದು ಅಭಿಮಾನಿಗಳು ಮತ್ತು ಗ್ರಾಮಸ್ಥರು ಮನವಿ ಮಾಡಿದರು.
ಜೆಡಿಎಸ್ ಯುವ ಮುಖಂಡ ಸಂತೋಷ್ ತಮ್ಮಣ್ಣ, ನಿರ್ಮಾಪಕ ರಾಕಲೈನ್ ವೆಂಕಟೇಶ್, ಶ್ರೀ ಕಾಲಭೈರವೇಶ್ವರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೋಗೀಗೌಡ, ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಸೀನಪ್ಪ, ಕರಡಕೆರೆ ಹನುಮಂತೇಗೌಡ, ಡಿ.ಎ.ಕೆರೆ ಮಂಚೇಗೌಡ, ಜಿ.ಡಿ.ಹಳ್ಳಿ ಅರವಿಂದ್, ಯಜಮಾನ್ ಶಿವಲಿಂಗೇಗೌಡ, ಡಿ.ಎ.ಕೆರೆ ರಘು, ಪುಟ್ಟೇಗೌಡ, ಪ್ರದೀಪ್, ಸಿದ್ದೇಗೌಡ, ಕುಮಾರ್, ಜ್ಯೋತಿಕುಮಾರ್, ಪ್ರಸನ್ನ, ಮಧು, ರಮೇಶ್, ಇತರರು ಹಾಜರಿದ್ದರು.







