ಕಣ್ಣಿನಿಂದ ಪೆಲೆಟ್ ಹೊರತೆಗೆಯಲು ಕಾಶ್ಮೀರದ 17 ತಿಂಗಳ ಮಗುವಿಗೆ 2ನೇ ಶಸ್ತ್ರಚಿಕಿತ್ಸೆ

ಶ್ರೀನಗರ, ಡಿ.9: ಕಾಶ್ಮೀರದ ಹದಿನೇಳು ತಿಂಗಳ ಪುಟ್ಟ ಮಗು ಹಿಬಾ ನಿಸಾರ್ ಬಲಗಣ್ಣಿಗೆ ಪೆಲೆಟ್ ಗುಂಡು ಹೊಕ್ಕು ಹತ್ತು ದಿನಗಳ ನಂತರವೂ ಶ್ರೀ ಮಹಾರಾಜಾ ಹರಿಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಮ್ಮನ ಮಡಿಲಲ್ಲಿರುವ ಮಗುವಿಗೆ ತನ್ನ ನೋವನ್ನು ಮಾತಿನಲ್ಲಿ ಅಭಿವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಆಕೆಯ ಅಣ್ಣ ಶಹದಾದ್ (5) ಆಕೆಯನ್ನು ಸಂತೈಸುವಲ್ಲಿ ನಿರತನಾಗಿದ್ದಾನೆ.
ಶೋಪಿಯಾನ್‍ನಲ್ಲಿ ಹತ್ತು ದಿನಗಳ ಹಿಂದೆ ನಡೆದ ಪ್ರತಿಭಟನೆ ವೇಳೆ ಈ ಮಗುವಿನ ಕಣ್ಣಿಗೆ ಪೆಲೆಟ್ ಗುಂಡು ತಾಗಿತ್ತು. "ಈಕೆ ಈಗ ಬಲಗಣ್ಣಿನಲ್ಲಿ ನೋಡಲು ಸಾಧ್ಯವೇ ಅಥವಾ ಮುಂದೆ ಅಂತಹ ಅವಕಾಶವಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ನಾವು ಮಾತ್ರ ಆಸೆ ಕೈಬಿಟ್ಟಿಲ್ಲ. ಆಕೆ ಇನ್ನೂ ಎಳೆವಯಸ್ಸಿನ ಮಗು ಆಗಿರುವುದರಿಂದ ಚೇತರಿಸಿಕೊಳ್ಳುತ್ತಾಳೆ ಎಂಬ ವಿಶ್ವಾಸ ನಮ್ಮದು" ಎಂದು ಮಗುವಿನ ಕಣ್ಣಿನ ಮುಂದೆ ಬೆರಳಾಡಿಸುತ್ತಾ ಆಕೆ ಅದನ್ನು ಗಮನಿಸುತ್ತಾಳೆಯೇ ಎಂದು ಪರೀಕ್ಷಿಸುತ್ತಿರುವ ತಾಯಿ ಮರ್ಸಲಾ ಜಾನ್ ಹೇಳುತ್ತಾರೆ.
ತಂದೆ ನಿಸಾರ್ ಕೃಷಿ ಕಾರ್ಮಿಕ. ಸೇಬುಹಣ್ಣು ಪ್ಯಾಕ್ ಮಾಡುವ ಕೆಲಸ ಮಾಡುತ್ತಾರೆ. ರಾಜ್ಯ ಸರ್ಕಾರ ಇವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದೆ. ಇದರಿಂದಾಗಿ ಸೋಪಿಯಾನ್ ಮತ್ತು ಶ್ರೀನಗರ ನಡುವಿನ ಪ್ರಯಾಣ ಹಾಗೂ ಆಸ್ಪತ್ರೆ ವೆಚ್ಚ ಭರಿಸುವುದು ಸಾಧ್ಯವಾಗಿದೆ ಎಂದು ಅವರು ಹೇಳುತ್ತಾರೆ. ಹಿಬಾ ಪ್ರಕರಣದ ಮೇಏಲೆ ವಿಭಾಗೀಯ ಆಯುಕ್ತರ ಕಚೇರಿ ನಿಗಾ ಇಟ್ಟಿದೆ ಎಂದು ಜಿಲ್ಲಾಧಿಕಾರಿ ಉವೈಸ್ ಅಹ್ಮದ್ ಹೇಳುತ್ತಾರೆ. ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತದೆ. ವೈದ್ಯರ ಜತೆ ಸಂಪರ್ಕದಲ್ಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಕಾಶ್ಮೀರ ಹಿಂಸಾಚಾರದಲ್ಲಿ ಪೆಲೆಟ್ ಗುಂಡು ತಗುಲಿದ ಅತ್ಯಂತ ಕಿರಿಯ ಮಗು ಹಿಬಾ. 2016ರಿಂದೀಚೆಗೆ 1200ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಪೆಲೆಟ್ ತಗುಲಿದೆ. ಪೆಲೆಟ್ ಹೊರತೆಗೆಯಲು ಹಿಬಾಗೆ 2ನೆ ಬಾರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ.







