ಮೊದಲ ಟೆಸ್ಟ್ : ಗೆಲುವಿನ ಹಾದಿಯಲ್ಲಿ ಭಾರತ
ಆಸ್ಟ್ರೇಲಿಯಕ್ಕೆ ಸೋಲಿನ ಭೀತಿ

ಆಡಿಲೇಡ್ , ಡಿ.9: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಪ್ರವಾಸಿ ಭಾರತದ ವಿರುದ್ಧ ಗೆಲುವಿಗೆ 323 ರನ್ ಗಳ ಸವಾಲು ಪಡೆದಿರುವ ಆಸ್ಟ್ರೇಲಿಯ ಸೋಲಿನ ಭೀತಿ ಎದುರಿಸುವಂತಾಗಿದೆ.
ಇದರೊಂದಿಗೆ ವಿರಾಟ್ ಕೊಹ್ಲಿ ಪಡೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಗೆಲುವಿನ ಕನಸು ಕಾಣುತ್ತಿದೆ.
ಟೆಸ್ಟ್ ನ ನಾಲ್ಕನೇ ದಿನವಾಗಿರುವ ರವಿವಾರ ಆಟ ಕೊನೆಗೊಂಡಾಗ ಆಸ್ಟ್ರೇಲಿಯ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 104 ರನ್ ಗಳಿಸಿದೆ. 31 ರನ್ ಗಳಿಸಿರುವ ಶಾನ್ ಮಾರ್ಷ್ ಹಾಗೂ 11 ರನ್ ಗಳಿಸಿರುವ ಟ್ರಾವಿಸ್ ಹೆಡ್ ಔಟಾಗದೆ ಕ್ರೀಸ್ ನಲ್ಲಿದ್ದಾರೆ.
ಆಸ್ಟ್ರೇಲಿಯ ಗೆಲುವಿಗೆ 219 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
ವೇಗಿ ಮುಹಮ್ಮದ್ ಶಮಿ(15ಕ್ಕೆ 2) ಮತ್ತು ಸ್ಪಿನ್ನರ್ ಆರ್ ಅಶ್ವಿನ್ (44ಕ್ಕೆ 2) ದಾಳಿಗೆ ಸಿಲುಕಿ ಆಸ್ಟ್ರೇಲಿಯ ಅಗ್ರ ಸರದಿಯ ದಾಂಡಿಗರನ್ನು ಕಳೆದುಕೊಂಡಿದೆ. ಆ್ಯರೊನ್ ಫಿಂಚ್ (11), ಮಾರ್ಕುಸ್ ಹ್ಯಾರೀಸ್ (26), ಉಸ್ಮಾನ್ ಖ್ವಾಜಾ(8) ಮತ್ತು ಹ್ಯಾಂಡ್ಸ್ ಕಾಂಬ್ (14) ಔಟಾಗದ್ದಾರೆ.
ಇದಕ್ಕೂ ಮೊದಲು ಭಾರತ ಎರಡನೇ ಇನಿಂಗ್ಸ್ ನಲ್ಲಿ 307 ರನ್ ಗಳಿಗೆ ಆಲೌಟಾಗಿದೆ.
ಮೂರನೇ ದಿನದಾಟದಂತ್ಯಕ್ಕೆ ಭಾರತ ಎರಡನೇ ಇನಿಂಗ್ಸ್ ನಲ್ಲಿ 61 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತ್ತು. ಚೇತೇಶ್ವರ ಪೂಜಾರ 40 ರನ್ ಮತ್ತು ಅಜಿಂಕ್ಯ ರಹಾನೆ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.
ನಾಲ್ಕನೇ ದಿನದ ಆಟ ಮುಂದುವರಿಸಿದ ಭಾರತ ಈ ಮೊತ್ತಕ್ಕೆ 156 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಪೂಜಾರ 71 ರನ್ ಮತ್ತು ರಹಾನೆ 70 ರನ್ , ವಿಕೆಟ್ ಕೀಪರ್ ರಿಷಭ್ ಪಂತ್ 28 ರನ್ ಗಳಿಸಿದರು.
ಆಸ್ಟ್ರೇಲಿಯದ ಜೋಶ್ ಹೆಝಲ್ ವುಡ್ 52ಕ್ಕೆ 3 ವಿಕೆಟ್, ಮಿಚೆಲ್ ಸ್ಟಾರ್ಕ್ , ಪಾಟ್ ಕಮಿನ್ಸ್ , ನಥಾನ್ ಲಿಯೊನ್ ತಲಾ 2 ವಿಕೆಟ್ ಪಡೆದರು.