ಬಂಟ್ವಾಳ: ಇಂದಿರಾ ಕ್ಯಾಂಟೀನ್ ಗೆ ಸಚಿವ ಯು.ಟಿ. ಖಾದರ್ ಚಾಲನೆ
ಹಕ್ಕುಪತ್ರ ವಿತರಣೆ

ಬಂಟ್ವಾಳ, ಡಿ. 9: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಇಂದಿರಾ ಕ್ಯಾಂಟೀನ್’ ರವಿವಾರ ಬಿ.ಸಿ.ರೋಡ್ ಮಿನಿವಿಧಾನ ಸೌಧ ಸಮೀಪ ಪ್ರಾರಂಭಗೊಂಡಿದ್ದು, ನಗರಾಭಿವೃದ್ಧಿ, ವಸತಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.
ಬಂಟ್ವಾಳ ಮಿನಿವಿಧಾನ ಸೌಧದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಫಲಾನುಭವಿಗಳಿಗೆ 94ಸಿ, 944ಸಿಸಿ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿ ಹೋಬಳಿ ಮಟ್ಟದ ಇಂದಿರಾ ಕ್ಯಾಂಟೀನ್ ಅನ್ನು ಉಳ್ಳಾಲದಲ್ಲಿ ಪ್ರಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ಸಮಿಶ್ರ ಸರಕಾರದ ಸಹಮತದೊಂದಿಗೆ ಪ್ರತಿ ಹೋಬಳಿ ಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ತೆರೆಯಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಮತಾ ಗಟ್ಟಿ, ಮಂಜುಳ ಮಾವೆ, ಪದ್ಮಶೇಖರ ಜೈನ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ ಉಪಸ್ಥಿತರಿದ್ದರು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ, ರಾಮ ಕಾಟಿಪಳ್ಳ ವಂದಿಸಿ, ಮಂಜು ವಿಟ್ಲ ನಿರೂಪಿಸಿದರು. ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಫಲಾನುಭವಿಗಳಿಗೆ ಹಕ್ಕುಗಳನ್ನು ನೀಡುವಲ್ಲಿ ಸಹಕರಿಸಿದರು. ಒಟ್ಟು 651 ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಯಿತು.