ಬಿಜೆಪಿ ರ್ಯಾಲಿ ನಡೆಸಿದ ಸ್ಥಳವನ್ನು ಗಂಗಾಜಲದಿಂದ ಶುದ್ಧಗೊಳಿಸಿದ ಟಿಎಂಸಿ ಕಾರ್ಯಕರ್ತರು

ಕೂಚ್ ಬಿಹಾರ್, ಡಿ.9: ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರ್ಯಾಲಿ ನಡೆಸಿದ ಜಾಗವನ್ನು ಸಗಣಿ ಮತ್ತು ಗಂಗಾಜಲದಿಂದ ಶುದ್ಧಗೊಳಿಸಿದ ಬಗ್ಗೆ ವರದಿಯಾಗಿದೆ. ಬಿಜೆಪಿ ಮುಖಂಡರು ಆಗಮಿಸಿ ಕೋಮುಪ್ರಚೋದಕ ಸಂದೇಶ ಸಾರಿದ ಜಾಗವನ್ನು ಶುದ್ಧೀಕರಿಸಿದ್ದೇವೆ ಎಂಧು ಸ್ಥಳೀಯ ಟಿಎಂಸಿ ನಾಯಕ ಪಂಕಜ್ ಘೋಷ್ ಹೇಳಿದ್ದಾರೆ.
"ಇದು ಮದನಮೋಹನ ದೇವರ ಪವಿತ್ರಭೂಮಿ. ಆದ್ದರಿಂದ ಹಿಂದೂ ಸಂಪ್ರದಾಯದ ಪ್ರಕಾರ ನಾವು ಶುದ್ಧೀಕರಿಸಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಮದನಮೋಹನ ರಥ ಹೊರತುಪಡಿಸಿ ಯಾವ ರಥಯಾತ್ರೆಯನ್ನೂ ಮಾಡುವಂತಿಲ್ಲ ಎಂದು ಪಕ್ಷದ ಬೆಂಬಲಿಗರೊಬ್ಬರು ಹೇಳಿದ್ದಾರೆ.
ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಡಿಸೆಂಬರ್ 7, 9 ಮತ್ತು 14ರಂದು ಕೂಚ್‍ಬೆಹಾರ್, ಸೌತ್ 24 ಪರಗಣ ಮತ್ತು ಬಿರ್‍ಭೂಮ್‍ನಿಂದ ರಥಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದರು. ರಾಜ್ಯದ ಎಲ್ಲ 42 ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ. ಈ ಮೂರೂ ಯಾತ್ರೆಗಳ ಸಮಾರೋಪವನ್ನು ಕೊಲ್ಕತ್ತಾದಲ್ಲಿ ಬೃಹತ್ ರ್ಯಾಲಿಯೊಂದಿಗೆ ಆಯೋಜಿಸಲು ಪಕ್ಷ ನಿರ್ಧರಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಭಾಗವಹಿಸುವರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ರಥಯಾತ್ರೆಯನ್ನು ರಾವಣಯಾತ್ರೆ ಎಂದು ಕರೆದಿದ್ದಾರೆ. ಇಂಥ ರಾಜಕೀಯ ದುರುದ್ದೇಶದ ಯಾತ್ರೆಯನ್ನು ನಿರ್ಲಕ್ಷಿಸುವಂತೆ ಅವರು ಕರೆ ನೀಡಿದ್ದಾರೆ.







