ಪ್ರವಾದಿ ನಿಂದನೆ: ಶಶಿಕಾಂತ್ ಪೂಜಾರಿ ಪಡುಬೆಳ್ಳೆ ವಿರುದ್ಧ ಪ್ರಕರಣ ದಾಖಲು

ಶಿರ್ವ, ಡಿ.9: ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನಿಂದನೆ ಮಾಡಿರುವ ಪಡುಬೆಳ್ಳೆಯ ಶಶಿಕಾಂತ್ ಪೂಜಾರಿ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ನಲ್ಲಿ ಮುಹಮ್ಮದ್ ನಾಸಿರ್ ಹಾಕಿರುವ ಪೋಸ್ಟ್‌ಗೆ ಡಿ. 8ರಂದು ಕಮೆಂಟ್ ಮಾಡಿರುವ ಶಶಿಕಾಂತ್ ಪೂಜಾರಿ, ಪ್ರವಾದಿ ಬಗ್ಗೆ ಅಶ್ಲೀಲವಾಗಿ ನಿಂದಿಸಿ, ಕೋಮು ಪ್ರಚೋದನೆ ಮಾಡಿರುವುದಾಗಿ ಕಾಪು ಚಂದ್ರನಗರದ ಶಬ್ಬೀರ್ ಅಬ್ದುಲ್ ಖಾದರ್ ದೂರು ನೀಡಿದ್ದಾರೆ.
ಈ ಮೂಲಕ ಶಶಿಕಾಂತ್ ಪೂಜಾರಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದು, ಆರೋಪಿ ಶಿರ್ವದಂತಹ ಕೋಮು ಸೌಹಾರ್ದ ಪ್ರದೇಶದಲ್ಲಿ ಸಮುದಾಯವನ್ನು ನಿಂದಿಸುವ ಮತ್ತು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಹಿಂದೂ ಧರ್ಮದ ವಿರುದ್ಧ ಎತ್ತಿಕಟ್ಟಿ ಕೋಮು ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಪ್ರವಾದಿಯನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವುದಾಗಿ ದೂರಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಯನ್ನು ಅಶ್ಲೀಲವಾಗಿ ನಿಂದಿಸಿ ಎರಡು ಕೋಮುಗಳ ನಡುವೆ ವೈಷಮ್ಯ ಉಂಟಾಗುವಂತೆ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಶಶಿಕಾಂತ್ ಪೂಜಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ದೂರಿನಲ್ಲಿ ತಿಳಿಸಲಾಗಿದ್ದು, ಅದರಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ 2008 66(ಡಿ), ಐಪಿಸಿ 505(2)ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.