ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭ ಗೊಂದಲ ಸೃಷ್ಟಿಸಿದ ಬಿಜೆಪಿ: ಚಂದ್ರಪ್ರಕಾಶ್ ಶೆಟ್ಟಿ
ಬಂಟ್ವಾಳ, ಡಿ. 9: ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭ ಉದ್ದೇಶಪೂರ್ವಕವಾಗಿ ಗೊಂದಲವನ್ನು ಸೃಷ್ಟಿಸಿರುವ ಬಿಜೆಪಿ ಜನಪ್ರತಿನಿಧಿಗಳಿಂದ ಜನರಿಗೆ ದ್ರೋಹವಾಗಿದೆ. ಮಾಜಿ ಸಚಿವ ರಮಾನಾಥ ರೈ ಅವರಿಗೆ ಅವಮಾನ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ರವಿವಾರ ಸಂಜೆ ಪಕ್ಷ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಆಸನಗಳಲ್ಲಿ ಹೆಸರನ್ನು ನಮೂದಿಸಲಾಗಿದ್ದು, ರೈ ಅವರಿಗೆ ಸಭಾಂಗಣದ ಕೆಳಗಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಲಾಗಿದ್ದು, ಮಾಜಿ ಸಚಿವರೊಬ್ಬರನ್ನು ಆಹ್ವಾನಿಸುವ ಸೌಜನ್ಯವನ್ನೂ ಮಾಡಲಿಲ್ಲ ಎಂದು ದೂರಿದರು.
ಶಾಸಕ ರಾಜೇಶ್ ನಾಯ್ಕ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಸಣ್ಣಪುಟ್ಟ ಘಟನೆಗಳನ್ನು ಉದ್ದೇಶಪೂರ್ವಕವಾಗಿ ದೊಡ್ಡದಾಗಿಸುತ್ತಿದ್ದಾರೆ. ರವಿವಾರ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಸಹಜವಾಗಿಯೇ ಎರಡು ಪಕ್ಷಗಳ ಕಾರ್ಯಕರ್ತರು ಸೇರುವ ಸಂದರ್ಭ ಸಣ್ಣಪುಟ್ಟ ಗೊಂದಲಗಳು ಉಂಟಾಗುವುದು ಸಹಜ. ಆದರೆ, ಬಿಜೆಪಿಯ ಸಂಸದರು ಮತ್ತು ಶಾಸಕರು ಅದನ್ನೇ ದೊಡ್ಡ ವಿಷಯವನ್ನಾಗಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸದೆ ಜನರನ್ನು ಅವಮಾನಿಸಿದ್ದಾರೆ. ಹಿಂದೆ ಬಾಳ್ತಿಲದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಎರಡೆರಡು ಬಾರಿ ಇಂದಿರಾ ಕ್ಯಾಂಟೀನ್ ಆವರಣ ಗೋಡೆ ಒಡೆದ ಬಿಜೆಪಿಯವರದ್ದು, ಪುಂಡಾಟಿಕೆಯಲ್ಲವೇ ಎಂದು ಪ್ರಶ್ನಿಸಿದ ಶೆಟ್ಟಿ, ಬಿಜೆಪಿ ಮುಖಂಡರಿಗೂ ನಮಗೂ ಮಾತಿನ ಚಕಮಕಿ ನಡೆದಿದ್ದು ನಿಜ. ಆದರೆ, ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಬಾರದು ಎಂದು ಬಿಜೆಪಿಯವರು ಪೂರ್ವಯೋಜಿತವಾಗಿಯೇ ಬಹಿಷ್ಕರಿಸಿದ್ದಾರೆ. ನಮ್ಮ ನಾಯಕರಾದ ರಮಾನಾಥ ರೈ ಬಂದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದೇಕೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲಿಯಾನ್, ಗಂಗಾಧರ, ಪದ್ಮಶೇಖರ ಜೈನ್, ಸದಾಶಿವ ಬಂಗೇರ, ಚಂದ್ರಶೇಖರ ಕರ್ಣ, ಅಬ್ಬಾಸ್ ಅಲಿ, ಸಂಪತ್ ಕುಮಾರ್ ಶೆಟ್ಟಿ, ಜೋಸ್ಪಿನ್ ಡಿಸೋಜ, ಜೆಸಿಂತಾ ಡಿಸೋಜ ಮತ್ತು ಮಲ್ಲಿಕಾ ಶೆಟ್ಟಿ ಹಾಜರಿದ್ದರು.







