ಪರಭಾಷಾ ಚಲನಚಿತ್ರಗಳನ್ನು ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುವಂತೆ ಒತ್ತಾಯ
ಬೆಂಗಳೂರು, ಡಿ. 9: ಪರಭಾಷಾ ಚಲನಚಿತ್ರಗಳನ್ನು ಕನ್ನಡ ಭಾಷೆಗೆ ಡಬ್ಬಿಂಗ್ ಮಾಡಬೇಕು. ಇದರಿಂದ ಆಧುನಿಕ ತಂತ್ರಜ್ಞಾನ, ವಿಜ್ಞಾನದಂತಹ ಮಾಹಿತಿ ಕನ್ನಡಿಗರಿಗೆ ಸಿಗುತ್ತದೆ ಎಂದು ಬನವಾಸಿ ಬಳಗದ ಸದಸ್ಯರು ಪ್ರತಿಭಟಿಸಿದ್ದಾರೆ.
ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಡಬ್ಬಿಂಗ್‌ಗಾಗಿ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಿಭಟನಕಾರರು, ಅನ್ಯ ಭಾಷೆಯ ಚಲನಚಿತ್ರ ನೋಡಿ ಅಲ್ಪ-ಸ್ವಲ್ಪ ವಿಷಯಗಳನ್ನು ಗ್ರಹಿಸುವ ಜನತೆಗೆ, ಮಾತೃ ಭಾಷೆಯಲ್ಲಿಯೇ ಚಿತ್ರವನ್ನು ನೋಡುವುದರಿಂದ ವಿಷಯ ಜ್ಞಾನ ತನ್ನ ಅಂತರಂಗಕ್ಕೆ ಇಳಿಯುತ್ತದೆ ಎಂದು ಹೇಳಿದರು.
ನಾಡು-ನುಡಿಯ ಸಾರ್ವಭೌಮತ್ವವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದನ್ನು ಸಾಕಾರಗೊಳಿಸಲು ಪರಭಾಷಾ ಮನರಂಜನೆಯನ್ನು ಡಬ್ಬಿಂಗ್ ಮೂಲಕ ಕನ್ನಡಕ್ಕೆ ತರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದರು. ಕೆಲ ಟಿವಿ ವಾಹಿನಿಗಳು ಪರಭಾಷಾ ಚಿತ್ರ ವಿತರಕರ ಕೈವಾಡದಿಂದ ಡಬ್ಬಿಂಗ್ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಇದನ್ನು ಬನವಾಸಿ ಬಳಗ ಖಂಡಿಸಲಿದೆ. ಕೇಂದ್ರ ಸರಕಾರದ ಭಾಷಾ ನೀತಿಯಿಂದ ಹಿಂದಿ ಹೇರಿಕೆ ನಡೆಯುತ್ತಿದ್ದರೆ, ಇನ್ನೊಂದೆಡೆ ಡಬ್ಬಿಂಗ್ ತಡೆಯುವ ಮೂಲಕ ತುಳು, ತೆಲುಗು, ಇನ್ನಿತರ ಭಾಗಗಳ ಹೇರಿಕೆಗೆ ಕಾರಣವಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.







