ಅಕ್ರಮ ವಲಸಿಗರಿಗೆ ಭಾರತ ಧರ್ಮಶಾಲೆಯಲ್ಲ : ಅಮಿತ್ ಶಾ
ಹೊಸದಿಲ್ಲಿ, ಡಿ.9: ಭಾರತವು ಅಕ್ರಮ ವಲಸಿಗರು ಬಂದು ನೆಲೆಸುವ ಧರ್ಮಶಾಲೆಯಲ್ಲ. ದೇಶದ ಸಂಪನ್ಮೂಲವನ್ನು ಬಳಕೆ ಮಾಡಿಕೊಳ್ಳುವ ಹಕ್ಕು ಭಾರತೀಯರಿಗೆ ಮಾತ್ರವಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಅಕ್ರಮ ವಲಸೆ ಸಮಸ್ಯೆ ದೇಶಕ್ಕೆ ಎದುರಾಗಿರುವ ಬೆದರಿಕೆಯಾಗಿದೆ . ದೇಶದ ಸಮಸ್ಯೆಯನ್ನು ನಿವಾರಿಸಲು ಪೌರರ ನೋಂದಣಿ ದಾಖಲೆ (ಎನ್‌ಆರ್‌ಸಿ) ಸಿದ್ಧಪಡಿಸಲಾಗಿದೆ. ಎನ್‌ಆರ್‌ಸಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದವರು ಹೇಳಿದ್ದಾರೆ. ಯಾರು ಬೇಕಾದರೂ ಬಂದು ನೆಲೆಸಲು ಈ ದೇಶ ಧರ್ಮಶಾಲೆಯಲ್ಲ. ಇಲ್ಲಿಯ ನಾಗರಿಕರು ಮಾತ್ರ ಇಲ್ಲಿ ವಾಸಿಸಲಿ ಮತ್ತು ಅವರಿಗೆ ದೇಶದ ಸಂಪನ್ಮೂಲವನ್ನು ಬಳಸಿಕೊಳ್ಳುವ ಹಕ್ಕಿದೆ ಎಂದು ಶಾ ಹೇಳಿದರು.
‘ದೈನಿಕ ಜಾಗರಣ್’ ಮಾಧ್ಯಮ ಗುಂಪು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಒಳ ನುಸುಳುವವರನ್ನು ಓಟ್‌ಬ್ಯಾಂಕ್‌ಗಳಾಗಿ ಬಳಸಿಕೊಳ್ಳುತ್ತಿದ್ದ ಪಕ್ಷಗಳು ಈಗ ಎನ್‌ಆರ್‌ಸಿ ವಿಷಯದಲ್ಲಿ ಬಿಜೆಪಿಯನ್ನು ದೂರುತ್ತಿವೆ. ದೇಶದ ಹಿತಾಸಕ್ತಿಯ ನಿಟ್ಟಿನಲ್ಲಿ ಬಿಜೆಪಿ ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಒಳನುಸುಳುವವರನ್ನು ಗುರುತಿಸಬೇಕು ಮತ್ತು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಬೇಕು. ಇವರಿಂದ ದೇಶದ ಭದ್ರತೆಗೂ ಅಪಾಯವಿದೆ. ಇವರನ್ನು ಗುರುತಿಸಿ ಗಡೀಪಾರು ಮಾಡಬೇಕೆಂಬುದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ ಎಂದು ಶಾ ಹೇಳಿದರು.