ಬೆಂಗಳೂರು: ಮಹಡಿಯಿಂದ ಬಿದ್ದು ಕೊಲಂಬಿಯಾ ಮಹಿಳೆ ಮೃತ್ಯು
![ಬೆಂಗಳೂರು: ಮಹಡಿಯಿಂದ ಬಿದ್ದು ಕೊಲಂಬಿಯಾ ಮಹಿಳೆ ಮೃತ್ಯು ಬೆಂಗಳೂರು: ಮಹಡಿಯಿಂದ ಬಿದ್ದು ಕೊಲಂಬಿಯಾ ಮಹಿಳೆ ಮೃತ್ಯು](https://www.varthabharati.in/sites/default/files/images/articles/2018/12/9/167191.jpg)
ಬೆಂಗಳೂರು, ಡಿ.9: ಸ್ನೇಹಿತರೊಟ್ಟಿಗೆ ಪಾರ್ಟಿ ಮುಗಿಸಿ ಪಾನಮತ್ತರಾಗಿ ಬಂದಿದ್ದ ಕೊಲಂಬಿಯಾ ಮಹಿಳೆ ಐದನೇ ಮಹಡಿಯಿಂದ ಬಿದ್ದು ಅನುಮಾನಸ್ವಾದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಜೀವನ್ ಭೀಮಾನಗರದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಕೊಲಂಬಿಯಾದ ಡ್ಯಾನಿಲಾ ಕೋರಕ್(35) ಎಂದು ಗುರುತಿಸಲಾಗಿದ್ದು, ಜೀವನ್ ಭೀಮಾನಗರದ ವಿಮಾನ ನಿಲ್ದಾಣ ರಸ್ತೆಯ ವೈಟ್ ಪ್ಲವರ್ ಹಿಲ್ ಅಪಾರ್ಟ್ಮೆಂಟ್ನಲ್ಲಿ ಕಳೆದ ಒಂದು ವರ್ಷದಿಂದ ವಾಸವಾಗಿದ್ದರು. ಇಲ್ಲಿನ ಸ್ಥಳೀಯ ಖಾಸಗಿ ಕಂಪೆನಿಯೊಂದರಲ್ಲಿ ಸ್ಪಾನಿಷ್ ಭಾಷೆಯನ್ನು ಇಂಗ್ಲೀಷ್ಗೆ ತರ್ಜುಮೆ ಮಾಡುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಐಸ್ಕ್ರೀಮ್ ಪಾರ್ಟಿಗೆ ಎಂದು ತೆರಳಿದ್ದ ಅವರು, ರವಿವಾರ ಬೆಳಗಿನ ಜಾವ ಸುಮಾರು ಮೂರು ಗಂಟೆ ಸಮಯದಲ್ಲಿ ಪಾನಮತ್ತರಾಗಿ ತನ್ನ ಮೂರು ಜನ ಸ್ನೇಹಿತರೊಂದಿಗೆ ವಾಪಸ್ಸಾಗಿದ್ದರು. ಕಟ್ಟಡದ ಐದನೇ ಮಹಡಿಯ ಲೀವಿಂಗ್ ಸ್ಥಳದಲ್ಲಿ ಮಾತನಾಡುತ್ತಾ ನಿಂತಿದ್ದ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ತಲೆಗೆ ತೀವ್ರವಾದ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.