ಇಡೀ ವಿಶ್ವಕ್ಕೆ ಇರುವುದೊಂದೇ ಧರ್ಮ ಮಾನವ ಧರ್ಮ: ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ
ಪ್ರವಾದಿ ಮುಹಮ್ಮದರ ಕುರಿತ ಸಾರ್ವಜನಿಕ ಸಮ್ಮೇಳನ

ಮಂಡ್ಯ, ಡಿ.9: ನಮ್ಮ ಧರ್ಮ ಬೇರೆ, ಅವರ ಧರ್ಮ ಬೇರೆ ಎನ್ನುವುದು ಸರಿಯಿಲ್ಲ. ಧರ್ಮ ಎಂದರೆ ಸಾಕು. ಇಡೀ ಪ್ರಪಂಚಕ್ಕೆ ಇರೋದು ಒಂದೇ ಧರ್ಮ ಮಾನವ ಧರ್ಮ. ವಿಶ್ವ ಧರ್ಮ ಎಂಬುದು ಅದರ ಅರ್ಥ. ನಾವೆಲ್ಲ ಧರ್ಮ ಕರ್ಮ ಮಾಡುತ್ತಾ ಪಂಥದ ಕಡೆ ಬಂದಿದ್ದೇವೆ ಎಂದು ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ನಗರದ ಗುತ್ತಲು ಬಡಾವಣೆಯ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರವಾದಿ ಮುಹಮ್ಮದರ ಕುರಿತು ಏರ್ಪಡಿಸಿದ್ದ ಸಾರ್ವಜನಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಬಸವಣ್ಣನವರು, ಗುರುನಾನಕ್, ಯೇಸು, ಮುಹಮ್ಮದ್ ಪೈಗಂಬರ್ ಹೀಗೆ ಹಲವರು ಒಂದೊಂದು ಪಥವನ್ನು ಹುಟ್ಟುಹಾಕಿದರು. ಧರ್ಮದ ಸಾರವನ್ನು ಧಾರಣೆ ಮಾಡಿಕೊಳ್ಳುವುದಕ್ಕೆ ಧರ್ಮ ಎನ್ನುತ್ತಾರೆ. ಸತ್ಯ, ಅಹಿಂಸೆ, ನೀತಿ, ನ್ಯಾಯ ಧಾರಣೆ ಮಾಡಿಕೊಳ್ಳುವುದು ಎಲ್ಲ ಧರ್ಮದ ಸಾರ. ನೀನು ಬದುಕು, ಎಲ್ಲರನ್ನೂ ಬದುಕಿಸು ಎಂಬುದು ಧರ್ಮ. ನೀನು ತಿಂದು ಮತ್ತೊಬ್ಬರಿಗೂ ಊಟ ನೀಡು ಎನ್ನುವುದು ಧರ್ಮ ಎಂದು ಅವರು ತಿಳಿಸಿದರು.
ನೀನೊಬ್ಬನೇ ಜೀವಿಸುವುದು ಧರ್ಮವಲ್ಲ. ಮತ್ತೊಬ್ಬರನ್ನು ಬದುಕಿಸುವುದು ಧರ್ಮ. ಕಾಡಿನಲ್ಲಿ ಪ್ರಾಣಿ, ಪಕ್ಷಿಗಳಿಗೆ ಯಾರು ಉಪದೇಶ ನೀಡಿದ್ದಾರೆ? ಆದರೂ ಎಲ್ಲವೂ ಆನಂದವಾಗಿವೆ. ಇಂತಹ ಮನೋಭಾವ ಮನುಷ್ಯರಲ್ಲೂ ಬೆಳೆಯಬೇಕು ಎಂದು ಅವರು ಸಲಹೆ ನೀಡಿದರು.
ಕಾಡಿನಲ್ಲಿರುವ ಪ್ರಾಣಿ, ಪಕ್ಷಿ ಒಂದಾಗಿ ಬಾಳುತ್ತಿವೆ. ನಾಡಿನಲ್ಲಿರುವ ಮನುಷ್ಯರು ಒಂದಾಗಿ ಬಾಳುತ್ತಿಲ್ಲ. ಮಾನವ ಜನ್ಮ ಬಲು ದೊಡ್ಡದು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪ ಎಂಬ ದಾಸರ ವಾಣಿಯಂತೆ ದೇಹವನ್ನು ಹಾಳೂ ಮಾಡಿಕೊಳ್ಳಬಾರದು. ಆನಂದದಿಂದ ಜೀವನ ನಡೆಸಬೇಕು. ಹಿಂಸೆಯಿಂದ ಜೀವನ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.
ಚರ್ಚ್, ಮಸೀದಿ, ಮಂದಿರದಲ್ಲಿ ಮಾಡುವ ಕರ್ಮ ಬೇರೆ ಬೇರೆಯಾಗಿರುತ್ತವೆ. ಆದರೆ, ಧರ್ಮದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಬ್ರಿಟೀಷರ ವಿರುದ್ಧ ಒಗ್ಗಟ್ಟಿನಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದಂತೆ ಧರ್ಮದ ವಿಚಾರದಲ್ಲೂ ಒಂದೇ ಎಂಬ ಭಾವನೆ ಬರುವವರೆಗೆ ಶಾಂತಿ ಸ್ಥಾಪನೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಒಂದು ಹಡಗಿನಲ್ಲಿ ಪ್ರಯಾಣಿಸುವ ನಾವುಗಳು ನಮ್ಮ ಹಿತವನ್ನು ನೋಡಿಕೊಳ್ಳುತ್ತೇವೆ. ಹಡಗಿನ ಹಿತ ಕಾಯಬೇಕು. ದೇಶ ಸಮೃದ್ಧಿಯಾಗಿದ್ದರೆ ನಾವು ಸಮೃದ್ಧಿಯಾಗಲು ಸಾಧ್ಯ. ನಿರಾಕಾರದ ದೇವರವಾಣಿಯಂತೆ ದೇವರು ಒಬ್ಬನೇ ನಾವು ಅವನನ್ನು ಪ್ರಾರ್ಥಿಸಬೇಕು, ಆರಾಧಿಸಬೇಕು. ಅವನಲ್ಲಿ ಎಲ್ಲವನ್ನು ಕಂಡುಕೊಳ್ಳಬೇಕು. ಧ್ಯಾನದಲ್ಲಿ ದೇವರನ್ನು ಕಾಣಬೇಕು ಎಂದರು.
ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾ ಖಾನ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಪಂ ಸದಸ್ಯ ಚಂದಗಾಲು ಶಿವಣ್ಣ, ಮುಡಾ ಮಾಜಿ ಅಧ್ಯಕ್ಷ ಮುನವ್ವರ್ ಖಾನ್, ಲಕ್ಷ್ಮಣ್ ಚೀರನಹಳ್ಳಿ, ಎಂ.ಬಿ.ಶ್ರೀನಿವಾಸ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಶೇಖ್ ಉಬೈದುಲ್ಲಾ, ರೆವರೆಂಡ್ ಫಾ.ರಾಜ್‍ಕುಮಾರ್, ಇಸ್ಲಾಮಿ ಮಾಹಿತಿ ಕೇಂದ್ರದ ಜನಾಬ್ ಮುಹಮ್ಮದ್ ನವಾಝ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಜನಾಬ್ ಮುಹಮ್ಮದ್ ಕುಂಞ್, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಮುಹಮ್ಮದ್ ಜಬೀವುಲ್ಲಾ ಇತರರು ಭಾಗವಹಿಸಿದ್ದರು.







